ಸ್ಥಾನಮಾನಗಳು ಸಮಾಜ ಸೇವೆಗೆ ದೊರೆತ ಅವಕಾಶ: ರಾಜೇಶ್ವರಿ ಎನ್.ಹೆಗಡೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೨೯; ಸಾರ್ವಜನಿಕ ಜೀವನದಲ್ಲಿ ಸ್ಥಾನಮಾನಗಳು ಸಮಾಜ ಸೇವೆಗೆ ದೊರೆತ ಅವಕಾಶ ಎಂದು ಭಾವಿಸಿ, ಕರ್ತವ್ಯ ನಿರ್ವಹಿಸಿದಾಗ ಮಾತ್ರ ದೇಶದ ಅಭಿವೃದ್ದಿಯಾಗಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಅಭಿಪ್ರಾಯಪಟ್ಟರು.ಜಿಲ್ಲಾ ವಕೀಲರ ಸಂಘ, ದಾವಣಗೆರೆ ವತಿಯಿಂದ ಕರ್ನಾಟಕ ರಾಜ್ಯ ತಾಂಡ ಅಭಿವೃದ್ದಿ ನಿಗಮದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಕೊಂಡ ಹಿರಿಯ ವಕೀಲ ಎನ್.ಜಯದೇವನಾಯ್ಕರನ್ನು ಸನ್ಮಾನಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿದರು.ಯಾವುದೇ ವ್ಯಕ್ತಿ ಅಧಿಕಾರ ದೊರೆತಾಗ ಹೆಚ್ಚು ವಿನಯವಂತನಾಗಬೇಕು. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ಮೂಲಕ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಹೃದಯವಂತಿಕೆಯನ್ನು ಹೊಂದಿದಾಗ ಮಾತ್ರ ಸ್ಥಾನಮಾನಗಳ ಜತೆ ವ್ಯಕ್ತಿಯ ವ್ಯಕ್ತಿತ್ವ ಬೆಳಗಲು ಸಾಧ್ಯ. ಸಾರ್ವಜನಿಕ ರಂಗದಲ್ಲಿ ನಿಸ್ವಾರ್ಥತೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿದ್ದು, ಈ ನಿಟ್ಟಿನಲ್ಲಿ ಇಂದು ಯುವ ಜನತೆಗೆ ಆದರ್ಶಗಳನ್ನು ಹೇಳಿಕೊಡುವ, ಆದರ್ಶವಾದ ವ್ಯಕ್ತಿತ್ವದ ಅವಶ್ಯಕೆತೆ ಇದೆ ಎಂದರು.