ಎಸ್ ಟಿ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರದಿಂದ ಮಹಾ ಮೋಸ: ಜಿ.ಎಸ್. ಶ್ಯಾಮ್
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೨೯: ಎಸ್.ಟಿ. ಸಮುದಾಯಕ್ಕೆ ಮೀಸಲಾಗಿದ್ದ ಅನುದಾನವನ್ನು ಕಾಂಗ್ರೆಸ್ ಸರ್ಕಾರ ನುಂಗಿ ಹಾಕಿದ್ದು, ದಲಿತರಿಗೆ ಮಹಾದ್ರೋಹ  ಬಗೆದಿದೆ ಎಂದು ರಾಜ್ಯ ಬಿಜೆಪಿ ಯುವ ಘಟಕ ಉಪಾಧ್ಯಕ್ಷರಾದ ಜಿ.ಎಸ್ ಶ್ಯಾಮ್ ಹೇಳಿದ್ದಾರೆ. ಈ ಕಾರಣಕ್ಕೆ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಿದ್ದು, ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತದೆ ಎಂದರು. ಬಿಜೆಪಿ ಯುವ ಘಟಕದಿಂದಲೂ ಪ್ರತಿಭಟನೆಯಲ್ಲಿ ಪಾಲ್ಗೊಂಡು ದಲಿತರಿಗೆ ಆಗಿರುವ ಅನ್ಯಾಯಕ್ಕೆ ಹೋರಾಟ ಮಾಡಿದ್ದೇವೆ. ದಲಿತರ ಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಅವರಿಗೆ ವಂಚನೆ ಮಾಡಿದೆ ಎಂದರೆ ಇದು ಎಂತ ಕೆಟ್ಟ ಸರ್ಕಾರ ಎಂದರು.ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಭ್ರಷ್ಟರೇ ಹೆಚ್ಚಾಗಿದ್ದಾರೆ, ಎಲ್ಲಿ ಅಧಿಕಾರ ತಪ್ಪುತ್ತದೆ ಎಂಬ ಭಯದಲ್ಲಿ ಮೋಸ ಮಾಡುತ್ತಿರುವ ಸಚಿವರು, ಅಧಿಕಾರಿಗಳ ವಿರುದ್ಧ ಸಿದ್ದರಾಮಯ್ಯ ಮಾತಾಡುತ್ತಿಲ್ಲ, ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದರು. ರಾಜ್ಯ ಬಿಜೆಪಿ ಯುವ ಘಟಕ ಬಡವರು, ಶೋಷಿತರ ಪರವಾಗಿಯೇ ಇರುತ್ತದೆ ಎಂದು ಜಿ.ಎಸ್ ಶ್ಯಾಮ್ ತಿಳಿಸಿದರು.