ಮಕ್ಕಳ ಮನ ಗೆಲ್ಲುವ ಪಾಠ ಬೋಧನೆ ಅಗತ್ಯ:ಬಿಇಒ
ಭಾಲ್ಕಿ:ಜೂ.29:ಶಿಕ್ಷಕರು ವಿದ್ಯಾರ್ಥಿಗಳ ಮನ ಮುಟ್ಟುವಂತೆ ಪಾಠ ಬೋಧನೆ ಮಾಡಬೇಕು. ಇಂತಹ ಶಿಕ್ಷಕರನ್ನು ವಿದ್ಯಾರ್ಥಿಗಳು ಜೀವನದುದ್ದಕ್ಕೂ ಸ್ಮರಿಸುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಜರ್ ಹುಸೇನ್ ಹೇಳಿದರು.
ತಾಲ್ಲೂಕಿನ ಹಾಲಹಳ್ಳಿ (ಕೆ) ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಯೋನಿವೃತ್ತಿ ಹೊಂದಿದ ಶಿಕ್ಷಕಿ ನಯನಾ ಕಲಬುರಗಿ ದಂಪತಿಯನ್ನು ಸನ್ಮಾನಿಸಿ ಅವರು ಮಾತನಾಡಿದರು.
ಶಿಕ್ಷಕ ವೃತ್ತಿ ಎಲ್ಲ ವೃತ್ತಿ ಗಳಿಗಿಂತಲೂ ಶ್ರೇಷ್ಠವಾಗಿದೆ. ಈ ವೃತ್ತಿಯ ಹಿರಿಮೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಗುರುತರ ಜವಬ್ದಾರಿ ಎಲ್ಲ ಶಿಕ್ಷಕರ ಮೇಲಿದೆ. ಶಿಕ್ಷಕರಾದವರು ಶಿಸ್ತು, ಪ್ರಾಮಾಣಿಕತೆ, ಸಮಯಪ್ರಜ್ಞೆ ಸೇರಿದಂತೆ ನೈತಿಕ ಮೌಲ್ಯಗಳ ಖಣಿಯಾಗಿರಬೇಕು ಎಂದು ತಿಳಿಸಿದರು.
ಶಿಕ್ಷಕಿ ನಯನಾ ಕಲಬುರಗಿ ಅವರು ಉತ್ತಮವಾಗಿ ಶೈಕ್ಷಣಿಕ ಸೇವೆ ಸಲ್ಲಿಸಿದ್ದಾರೆ. ಅವರ ಕರ್ತವ್ಯ ನಿಷ್ಠೆ ಬಗ್ಗೆ ಗ್ರಾಮಸ್ಥರಲ್ಲಿ ಮೆಚ್ಚುಗೆಯ ಭಾವವಿದೆ.
ಈ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಚೆನ್ನಾಗಿ ಬಂದಿದೆ. ಈ ವರ್ಷವೂ ಕೂಡಾ ವಿದ್ಯಾರ್ಥಿಗಳು ಉತ್ತಮವಾಗಿ ಅಭ್ಯಸಿಸಿ ಶಾಲೆಗೆ, ಹೆತ್ತವರಿಗೆ ಒಳ್ಳೆಯ ಹೆಸರು ತಂದು ಕೊಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ ಪ್ಯಾಗೆ ಪ್ರಮುಖರಾದ ರವಿ ಗಂಗಶೆಟ್ಟಿ, ಶಿವಶರಣಪ್ಪಾ ಬಿರಾದಾರ ಪಾಟೀಲ, ಶಿರೋಮಣಿ ಆಚಾರ್ಯ, ಶಾಂತಲಾ, ಸಂಜು ಬ್ಯಾಲಹಳ್ಳಿ, ಜಗನ್ನಾಥ ಲಿಂಬಾಶೆಟ್ಟಿ, ಸಾಬೇರ್ ಖಾನ್, ವಿವೇಕಾನಂದ ಅರಳಿ, ಸತೀಶಕುಮಾರ, ಶಿಲ್ಪಾ ದೊಡ್ಮನಿ, ವೃಶಾಲಿ ಕುಲಕರ್ಣಿ, ಸುಮ್ಮಿ ಸುಲ್ತಾನ್, ಇದ್ದರು.