ಸೋಮವಾರ ಮಾಜಿ ಸ್ಪೀಕರ್ ಕೃಷ್ಣ ರವರ ಹುಟ್ಟು ಹಬ್ಬ ಆಚರಣೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.29: ತಾಲ್ಲೂಕಿನ ಅಭಿವೃದ್ಧಿಗೆ ಶಾಸಕರಾಗಿ, ಮಂತ್ರಿಗಳಾಗಿ, ಸಂಸದರಾಗಿ, ವಿಧಾನಸಭೆಯ ಅಧ್ಯಕ್ಷರಾಗಿ ಸುಮಾರು 50ವರ್ಷಗಳ ಕಾಲ ಅರ್ಪಣಾ ಭಾವನೆಯಿಂದ, ಪ್ರಾಮಾಣಿಕವಾಗಿ ದಕ್ಷತೆಯಿಂದ ಕೆಲಸ ಮಾಡಿದ ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ಕೃಷ್ಣ ಅವರ 84 ನೇ ಜನ್ಮ ದಿನದ ಅಂಗವಾಗಿ ಇದೇ ಜುಲೈ 0 1 ರ ಸೋಮವಾರ ಬೆಳಿಗ್ಗೆ 10ಗಂಟೆಗೆ ಕೃಷಿ ಕುರಿತು ವಿಚಾರ ಸಂಕಿರಣ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಕೃಷ್ಣ ಪುರಸ್ಕಾರ ಕಾರ್ಯಕ್ರಮವನ್ನು ಪಟ್ಟಣದ ಸುಲೋಚನಮ್ಮ-ರಾಮದಾಸ್ ಸಭಾಂಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೇಹೊಸಳ್ಳಿ ಜವರಾಯಿಗೌಡ ಅವರು ತಿಳಿಸಿದರು.
ಕೆ.ಆರ್.ಪೇಟೆ ಪಟ್ಟಣದ ಒಕ್ಕಲಿಗರ ಹಾಸ್ಟೆಲ್ ಕಟ್ಟಡದಲ್ಲಿರುವ ಕೃಷ್ಣ ಪ್ರತಿಷ್ಠಾನದ ಕಚೇರಿಯಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಕೃಷ್ಣ ಅವರ ಒಡನಾಡಿಗಳಾದ ಕರ್ನಾಟಕ ವಿಧಾನಸಭೆಯ ಮಾಜಿ ಅಧ್ಯಕ್ಷರಾದ ರಮೇಶ್‍ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡುವರು. ಶಾಸಕ ಹೆಚ್.ಟಿ.ಮಂಜು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡುವರು. ಮಾಜಿ ಸಚಿವ ನಾರಾಯಣಗೌಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಗೌರವಿಸುವರು. ಕೃಷಿ ತಜ್ಞರಾದ ಮೈಸೂರಿನ ಕೃಷ್ಣಪ್ರಸಾದ್ ಅವರು ಕೃಷಿ ಉದ್ಯಮಗಳನ್ನು ಕಟ್ಟುವುದು ಹೇಗೆ? ಎಂಬ ವಿಷಯ ಕುರಿತು ಉಪನ್ಯಾಸ ನೀಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಜವರಾಯಿಗೌಡ ಅವರು ವಹಿಸುವರು ಎಂದು ತಿಳಿಸಿದರು
ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ಅಂತರ್ಜಲ ತಜ್ಞ ನವಿಲುಮಾರನಹಳ್ಳಿ ರಾಮೇಗೌಡ, ಪೌರಕಾರ್ಮಿಕ ಮಹಿಳೆ ಕರಪಮ್ಮ ಅವರಿಗೆ 2023-24ನೇ ಸಾಲಿನ ಕೃಷ್ಣ ನಾಗರೀಕ ಪುರಸ್ಕಾರ ನೀಡಿ ಗೌರವಿಸಲಾಗುವುದು. ಭಾರತೀಯ ಸೇನೆಯ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಅಧಿಕಾರಿಯಾಗಿ ತಾಲ್ಲೂಕಿಗೆ ಗೌರವ ತಂದಿರುವ ಬೂಕಹಳ್ಳಿ ಬಿ.ಎಂ.ಸಾಗರ್ ಅವರಿಗೆ ಕೃಷ್ಣ ವಿಶೇಷ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು
ಹಾಗೆಯೇ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಓದಿರುವ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕೃಷ್ಣ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಂಡ್ಯ ಜಿಲ್ಲೆಯ ಅಪಾರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಮನ್‍ಮುಲ್ ನಿರ್ದೇಶಕ ಡಾಲು ರವಿ, ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಜವರಾಯಿಗೌಡ ಮಾಹಿತಿ ನೀಡಿದರು ಹಾಗಾಗಿ ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಕೃಷ್ಣ ಅವರ ಅಭಿಮಾನಿಗಳು, ಒಡನಾಡಿಗಳು ಪಕ್ಷಾತೀತವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಜವರಾಯಿಗೌಡ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೃಷ್ಣ ಪ್ರತಿಷ್ಠಾನದ ಕಾರ್ಯದರ್ಶಿ ಕತ್ತರಘಟ್ಟ ವಾಸು, ಕೋಶಾಧ್ಯಕ್ಷ ಹೆಚ್.ಜೆ.ರಮೇಶ್, ಪ್ರತಿಷ್ಠಾನದ ನಿರ್ದೇಶಕರಾದ ಚನ್ನಿಂಗೇಗೌಡ, ಹಾದನೂರು ಪರಮೇಶ್, ಆಂತರಿಕ ಲೆಕ್ಕ ಪರಿಶೋಧಕ ತಿಮ್ಮೇಗೌಡ ಇತರರು ಉಪಸ್ಥಿತರಿದ್ದರು.