ಅತಿಥಿ ಗೃಹ ನಿರ್ಮಾಣ ಕಾಮಗಾರಿಗೆ ಮಂಜು ಭೂಮಿಪೂಜೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.29 : ಪ್ರವಾಸಿ ಮಂದಿರದ ಆವರಣದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಾಣವಾಗುತ್ತಿರುವ ಮೂರು ಕೋಟಿ ರೂ ವೆಚ್ಚದ ಹೈಟೆಕ್ ಅತಿಥಿ ಗೃಹಗಳ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್.ಟಿ.ಮಂಜು ಭೂಮಿ ಪೂಜೆ ನೆರವೇರಿಸಿದರು.
ಪಟ್ಟಣವು ಮಂಡ್ಯ ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿರುವುದರಿಂದ ತಾಲೂಕಿನ ಪುರಾಣ ಪ್ರಸಿದ್ಧ ತೀರ್ಥ ಕ್ಷೇತ್ರಗಳಾಗಿರುವ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮ ಹಾಗೂ ಭೂವರಹನಾಥ ಕಲ್ಲಹಳ್ಳಿ ಮತ್ತು ಹೊಸಹೊಳಲಿನ ಹೊಯ್ಸಳ ಶಿಲ್ಪಕಲೆಯ ಅಪೂರ್ವ ತಾಣ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯಕ್ಕೆ ಆಗಮಿಸುವ ಯಾತ್ರಿಕರು ಹಾಗೂ ಗಣ್ಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಹಿಂದಿನ ಬಿಜೆಪಿ ಸರ್ಕಾರವು ಮೂರು ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿತ್ತು. ಕಾಮಗಾರಿ ಟೆಂಡರ್ ಮುಗಿದು, ಕಾಮಗಾರಿ ಆರಂಭಿಸಬೇಕು ಅನ್ನುವಷ್ಟರಲ್ಲಿ ವಿಧಾನಸಭೆಯ ಚುನಾವಣಾ ನೀತಿ ಸಂಹಿತೆ ಜಾರಿಯಾದ ಕಾರಣ ಕಾಮಗಾರಿ ಆರಂಭವಾಗಿರಲಿಲ್ಲ. ಸದರಿ ಕಾಮಗಾರಿಗೆ ಶಾಸಕ ಹೆಚ್.ಟಿ.ಮಂಜು ಇಂದು ವಿಶೇಷವಾಗಿ ಭೂಮಿ ಪೂಜೆ ಮಾಡಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಾಣ ಮಾಡುತ್ತಿರುವ ಹೈಟೆಕ್ ಅತಿಥಿ ಗೃಹಗಳ ಕಾಮಗಾರಿಗೆ ಭೂಮಿ ಪೂಜೆ ಮಾಡಿದ್ದೇನೆ. ಅತಿಥಿಗೃಹಗಳ ನಿರ್ಮಾಣ ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು ಆದಷ್ಟು ಶೀಘ್ರವಾಗಿ ಕಾಮಗಾರಿಯನ್ನು ಮುಗಿಸಿ ಸೇವೆಗೆ ಅತಿಥಿಗೃಹಗಳು ಲೋಕಾರ್ಪಣೆಯಾಗಬೇಕು ಈ ದಿಕ್ಕಿನಲ್ಲಿ ಗುತ್ತಿಗೆದಾರರು ಆದಷ್ಟು ಶೀಘ್ರವಾಗಿ ಕಾಮಗಾರಿಯನ್ನು ಮುಗಿಸಿ ಕೊಡಬೇಕು ಎಂದು ಶಾಸಕ ಮಂಜು ನಿರ್ದೇಶನ ನೀಡಿದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್, ಎನ್.ಬಿ.ಎಂ. ನಿರ್ಮಾಣ್ ಸಂಸ್ಥೆಯ ಇಂಜಿನಿಯರ್ ಮೈಸೂರು ನಟರಾಜು,ಪುರಸಭಾ ಸದಸ್ಯ ನಟರಾಜು ಮಾಜಿ ಸದಸ್ಯ ಹೇಮಂತ್ ಕುಮಾರ್, ಎಪಿಎಂಸಿ ಮಾಜಿ ನಿರ್ದೇಶಕ ನಾಗರಾಜೇಗೌಡ,ರವಿಕುಮಾರ್ ಸೇರಿದಂತೆ ಹಲವರಿದ್ದರು.