ವಿದ್ಯಾರ್ಥಿ ಭವನ ನಿರ್ಮಿಸಲು ಸಂಪೂರ್ಣ ಸಹಕಾರ
ಮಾಲೂರು ಜೂ.೨೯: ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಒಕ್ಕಲಿಗ ಸಮಾಜದ ಸಂಘದ ವತಿಯಿಂದ ವಿದ್ಯಾರ್ಥಿ ಭವನ ನಿರ್ಮಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಕೆ.ವೈ ನಂಜೇಗೌಡ ಹೇಳಿದರು.
ಪಟ್ಟಣದ ವೈಟ್ ಗಾರ್ಡನ್ ಬಳಿ ಇರುವ ನೂತನ ಬಡಾವಣೆಯ ಸಿಎ ನಿವೇಶನದಲ್ಲಿ ತಾಲೂಕು ಒಕ್ಕಲಿಗರ ವಿದ್ಯಾರ್ಥಿ ಭವನ ನಾಮಫಲಕ ಅನಾವರಣ ಹಾಗೂ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆಯಲ್ಲಿ ನನ್ನ ಕುಲಬಾಂಧವರು ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಸಿಎ ನಿವೇಶನ ಮಂಜೂರು ಮಾಡಿಕೊಡಲು ಮನವಿ ಮಾಡಿದ್ದರು, ಅದರಂತೆ ಯೋಜನಾ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ ಅಧಿಕಾರಿಗಳು ಹಾಗೂ ಅಧ್ಯಕ್ಷರು ಸಮಿತಿಯ ಸದಸ್ಯರು ಸರ್ವಾನುಮತದಿಂದ ತೀರ್ಮಾನಿಸಿ ಒಕ್ಕಲಿಗರ ವಿದ್ಯಾರ್ಥಿ ಭವನ ನಿರ್ಮಾಣಕ್ಕಾಗಿ ಸಿಎ ನಿವೇಶನ ಮಂಜೂರು ಮಾಡಿಕೊಡಲಾಗಿದೆ, ಒಂದು ವರ್ಷದ ಅವಧಿಯೊಳಗೆ ವಿದ್ಯಾರ್ಥಿ ಭವನ ನಿರ್ಮಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಅನುಕೂಲ ಕಲ್ಪಿಸುವಂತೆ ಹೇಳಿದರು.
ತಾಲೂಕಿನಲ್ಲಿ ಮೊದಲನೇ ಅವಧಿಯಲ್ಲಿ ಶಾಸಕರಾಗಿದ್ದಾಗ ಎಲ್ಲಾ ಜಾತಿ ಧರ್ಮಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಮುಖ್ಯರಸ್ತೆಯಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆ ಸ್ಥಾಪಿಸಲಾಗಿದೆ ಪ್ರಸ್ತುತ ಕೆಂಪೇಗೌಡ ವೃತ್ತವಾಗಿದೆ.
ಎರಡನೇ ಅವಧಿಯಲ್ಲಿ ಶಾಸಕರಾಗಿದ್ದು ಒಕ್ಕಲಿಗರ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ವಿದ್ಯಾರ್ಥಿ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಿಕೊಡಲಾಗಿದೆ ಬೇರೆ ಜಾತಿ ಜನಾಂಗದವರ ಸಂಘಗಳಿಗೂ ಸಹ ನಿವೇಶನಗಳನ್ನು ನೀಡಲಾಗಿದ್ದು ಎಲ್ಲಾ ಜಾತಿ ಧರ್ಮದವರನ್ನು ಒಗ್ಗಟ್ಟಾಗಿ ಕರೆದೊಯ್ಯುವ ಗುಣ ಕೆಂಪೇಗೌಡ ವಂಶಸ್ಥರಾದ ಒಕ್ಕಲಿಗ ಸಮುದಾಯಕ್ಕಿದೆ.
ರಾಜಕೀಯ ಆರ್ಥಿಕವಾಗಿ ಮುಂದುವರೆಯಲು ಒಕ್ಕಲಿಗ ಸಮಾಜದವರು ಕೆಂಪೇಗೌಡ ಅವರನ್ನು ಮಾದರಿಯಾಗಿಟ್ಟುಕೊಂಡು ಸ್ಮರಿಸಬೇಕು ಸಮಾಜದಲ್ಲಿ ಎಲ್ಲರನ್ನು ಒಗ್ಗಟ್ಟಾಗಿ ಕರೆದೊಯ್ಯಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಭವನ ನಿವೇಶನದಲ್ಲಿ ಶಾಸಕ ಕೆ.ವೈ.ನಂಜೇಗೌಡ ಅವರು ಗಿಡ ನೆಟ್ಟು ನೀರು ಎರೆದರು.
ತಾಪಂ ಇ.ಒ.ಕೃಷ್ಣಪ್ಪ, ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸಿ ಲಕ್ಷ್ಮಿ ನಾರಾಯಣ್, ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಂ.ವಿಜಯನರಸಿಂಹ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಾಮೇಗೌಡ, ಕಾರ್ಯದರ್ಶಿ ಅನಂತರಾಜು, ಒಕ್ಕಲಿಗ ಸಮಾಜದ ಮುಖಂಡರಾದ ಆರ್ ಪ್ರಭಾಕರ್, ಮುನೇಗೌಡ, ವೆಂಕಟೇಶ್‌ಗೌಡ, ದಿನೇಶ್‌ಗೌಡ, ವಿನಯ್‌ಗೌಡ, ಪಿ.ಪರಮೇಶ್, ಸತೀಶ್, ತಿಮ್ಮರಾಯಪ್ಪ, ಡಿ.ಕೆ.ನಾರಾಯಣಸ್ವಾಮಿ, ಡಿ.ಕೆ.ನಾಗರಾಜ್, ಡಿ.ಎಂ.ವಿಜಯಕುಮಾರ್, ಮಿಂಡಹಳ್ಳಿ ಮುನೇಗೌಡ, ಪ್ರಗತಿ ಶ್ರೀನಿವಾಸ್, ರಾಘವೇಂದ್ರ, ಲಕ್ಷ್ಮೀನಾರಾಯಣ್, ಸಂಪತ್, ಸೋಮಣ್ಣ, ತಿರುಮಲಹಟ್ಟಿ ಬಾಬು, ಬ್ಯಾಲಹಳ್ಳಿ ಚಂದ್ರು, ಇನ್ನಿತರರು ಹಾಜರಿದ್ದರು.