ವಿದ್ಯಾರ್ಥಿಗಳು ಕೌಶಲ ಪಡೆಯುವತ್ತ ಆಸಕ್ತಿವಹಿಸಿ

ಸಂಜೆವಾಣಿ ನ್ಯೂಸ್
ಮೈಸೂರು : ಜೂ.29:- ದೇಶದಲ್ಲಿ ವರ್ಷಕ್ಕೆ 30 ಲಕ್ಷ ಮಂದಿ ಉನ್ನತ ಶಿಕ್ಷಣ ಪಡೆದು ಪದವೀಧರರಾಗುತ್ತಿದ್ದು, ಉದ್ಯೋಗ ಪಡೆ ಯುವುದು ಸವಾಲಾಗಿದೆ. ಅಧ್ಯಯನ ಹಾಗೂ ಕೌಶಲ ಪಡೆ ಯುವತ್ತ ವಿದ್ಯಾರ್ಥಿಗಳು ಆಸಕ್ತಿವಹಿಸಬೇಕು ಎಂದು ಕುಲಪತಿ ಪೆÇ್ರ.ಎನ್.ಕೆ.ಲೋಕನಾಥ್ ಹೇಳಿದರು.
ಮಾನಸಗಂಗೋತ್ರಿಯ ಲಲಿತಕಲಾ ಕಾಲೇಜಿನ ಸಭಾಂಗಣ ದಲ್ಲಿ ವಾಣಿಜ್ಯ ಅಧ್ಯಯನ ವಿಭಾಗ ಗುರುವಾರ ಆಯೋಜಿಸಿದ್ದ ಮಾನಸವೃದ್ಧಿ ವಾಣಿಜ್ಯ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ವಿಷಯಗಳಷ್ಟೇ ವಾಣಿಜ್ಯ ವಿಷಯಕ್ಕೆ ಪ್ರಾಧಾ ನ್ಯತೆ ಬಂದಿದೆ. ವ್ಯಾಪಾರ, ವಹಿವಾಟು, ಷೇರು ಮಾರುಕಟ್ಟೆ, ಹಣಕಾಸು ವಲಯ ವೇಗವಾಗಿ ಬೆಳೆಯುತ್ತಿದೆ. ಈ ಕ್ಷೇತ್ರಕ್ಕೆ ನುರಿತವರು ಬೇಕು. ಹೀಗಾಗಿ ವಿಷಯಾಧಾರಿತ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಸಂವಹನ ಸೇರಿದಂತೆ ವಿವಿಧ ಕೌಶಲಗಳನ್ನು ಸಿದ್ಧಿಸಿಕೊ ಳ್ಳಬೇಕು. ರಾಜ್‍ಕುಮಾರ್‍ರಂತೆ ಮೈಕಟ್ಟು, ರೂಪ ಇಲ್ಲದಿದ್ದರೂ ರಜನಿಕಾಂತ್ ಅವರಿಗೆ ಎಲ್ಲರನ್ನೂ ಸೆಳೆಯುವ ಕೌಶಲವಿತ್ತು. ಹೀಗಾಗಿಯೇ ಅವರ ಚಿತ್ರಗಳು ಜಪಾನ್, ಕೊರಿ ಯಾದಲ್ಲೂ ಯಶಸ್ಸು ಕಂಡಿವೆ ಎಂದು ಉದಾಹರಿಸಿದರು.
ಒಂದೇ ಸಮಯದಲ್ಲಿ ಎರಡು ಕೆಲಸ ಮಾಡಲಾಗದು. ಅಕಾಡೆಮಿಕ್ ಶಿಸ್ತನ್ನು ಬೆಳೆಸಿಕೊಳ್ಳಬೇಕು. ನೋಟ್ಸ್, ತರ ಗತಿ ಕಲಿಕೆಯಾಚೆಗೆ ಸ್ವಯಂ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡ ಬೇಕು. ಒಂದೇ ವಿಷಯದ ಕುರಿತು ನುರಿತ ತಜ್ಞರಾಗಲು ಮುಂದಾಗಬೇಕು ಎಂದರು.
ಉನ್ನತ ಶಿಕ್ಷಣ ಪಡೆಯುವುದು ಗುರಿಯಾಗಬೇಕು. ಒಂದು ವರ್ಷದ ಅವಧಿಯಲ್ಲಿ ನಾನೇನು ಸಾಧನೆ ಮಾಡಬೇಕು, ಎಷ್ಟು ಕಲಿಯಬೇಕು ಎಂಬುದರ ಬಗ್ಗೆಯೇ ಸದಾ ಯೋಚಿಸಿ ಕಾರ್ಯೋನ್ಮುಖರಾಗಿರಬೇಕು. ಮಾನವೀಯತೆ, ಪ್ರಾಮಾಣಿಕತೆ, ಕಲಿಕತೆಯಲ್ಲಿ ನಿರಂತರತೆ, ಪರಿಶ್ರಮ ಹಾಗೂ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು. ಅದೇ ನಮ್ಮನ್ನು ನಾಯಕರನ್ನಾಗಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಉದ್ಯಮಶೀಲರಾಗಲು ವಿದ್ಯಾರ್ಥಿಗಳು ಆಲೋಚಿಸಬೇಕು. ಉದ್ಯೋಗ ಸೃಷ್ಟಿಸಿ ದೇಶದ ಅಭಿವೃದ್ಧಿಗೆ ನೆರವಾಗಬೇಕು. ಅದಕ್ಕಾಗಿ ತಂತ್ರಜ್ಞಾನ ಹಾಗೂ ಮಾನವ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.
ಮೊಬೈಲ್, ಗ್ಯಾಜೆಟ್‍ಗಳ ಬಳಕೆ ಹೆಚ್ಚಿದಂತೆ ಚರ್ಚಿಸುವ ಅಭ್ಯಾಸ ಕಡಿಮೆಯಾಗಿದೆ. ಸಂವಾದಗಳು ಉತ್ತಮ ಸಮಾಜ ರೂಪಿಸುತ್ತವೆ. ಎಲ್ಲರನ್ನು ಒಂದುಗೂಡಿಸುತ್ತವೆಂಬುದನ್ನು ನೆನಪಿನಲ್ಲಿಡಬೇಕು ಎಂದು ಹೇಳಿದರು.
ಜೆ.ಕೆ.ಟೈಯರ್ ಕಂಪನಿಯ ಮುಖ್ಯ ವ್ಯವಸ್ಥಾಪಕಿ ಎ.ಸುಧಾಶ್ರೀ, ವಿಭಾಗದ ಮುಖ್ಯಸ್ಥ ಪೆÇ್ರ.ಎಚ್.ರಾಜಶೇಖರ್ ಹಾಜರಿದ್ದರು.