ದೇಶದ ಬೆಳವಣಿಗೆಯಲ್ಲಿ ವಿಜ್ಞಾನದ ಪಾತ್ರ ಅಪಾರ
ಸಂಜೆವಾಣಿ ನ್ಯೂಸ್
ಮೈಸೂರು : ಜೂ.29:- ವಿಜ್ಞಾನವಿಲ್ಲದೆ ಯಾವ ನೂತನ ಅವಿಷ್ಕಾರ, ಸಂಶೋಧನೆ ಸಾಧ್ಯವಿಲ್ಲ. ದೇಶದ ಅಭಿವೃದ್ಧಿಯಲ್ಲಿ ಮತ್ತು ಮಾನವನ ಸರ್ವತೋಮುಖ ಬೆಳವಣಿಗೆಯಲ್ಲಿ ವಿಜ್ಞಾನದ ಪಾತ್ರ ಅಪಾರವಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಮೌಲ್ಯಮಾಪನದ ಉಪ ಕುಲಸಚಿವ ಡಾ.ಬಸಪ್ಪ ತಿಳಿಸಿದರು.
ವಿಜಯ ವಿಠಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜ್ಞಾನ ವೇದಿಕೆ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯಕ್ರಮದಲ್ಲಿ ಅತ್ಯುನ್ನತ ತರಬೇತಿ ಹೊಂದುವ ಕೌಶಲ ಪಡೆಯುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸುಲಭವಾಗುತ್ತದೆ. ಕಲಿಕೆಯ ಉದ್ದೇಶ ಮತ್ತು ಗುರಿ ಅರಿತು ಯಾವ ಕ್ಷೇತ್ರ ಆರಿಸಿಕೊಳ್ಳುವಿರೋ ಅದರಲ್ಲಿ ನೀವು ಸಂಪೂರ್ಣ ಜ್ಞಾನ ಪಡೆಯಲು ಪ್ರಯತ್ನಿಸಿ. ಕೌಶಲ್ಯಾಧಾರಿತ, ನವನವೀನ ವೈಜ್ಞಾನಿಕ ಸಂಶೋಧನೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡು ದೇಶದ ಗೌರವ ಹೆಚ್ಚಿಸಬೇಕು. ಪರಿಸರಕ್ಕೆ ಪೂರಕವಾದ ಚಟುವಟಿಕೆಗಳಾದ ಪ್ಲಾಸ್ಟಿಕ್ ಬಳಕೆ ನಿಷೇಧ, ನೀರಿನ ಸದ್ಬಳಕೆ ಮುಂತಾದ ಪರಿಸರ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ವಿಜ್ಞಾನದಲ್ಲಿ ಸತತ ಅಧ್ಯಯನಶೀಲರಾಗಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿಜಯ ವಿಠಲ ವಿದ್ಯಾಸಂಸ್ಥೆಗಳ ಗೌರವ ಕಾರ್ಯದರ್ಶಿ ವಾಸುದೇವ ಭಟ್ ಮಾತನಾಡಿ, ಮಾನವ ಜೀವನ ಉತ್ತಮಪಡಿಸಲು ವಿದ್ಯಾವಂತರಾಗುವುದೇ ಮಾತ್ರವಲ್ಲದೆ ಹೊಸ ಹೊಸ ಅವಿಷ್ಕಾರ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು. ಮನುಕುಲದ ಉದ್ಧಾರಕ್ಕೆ ವಿಜ್ಞಾನಿಗಳ ಕೊಡುಗೆ ಅವಿಸ್ಮರಣೀಯ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಹೆಚ್.ಸತ್ಯಪ್ರಸಾದ್ ಮಾತನಾಡಿ, ವೈಜ್ಞಾನಿಕ ಮನೋಭಾವ, ಚಿಂತನೆ ವಿದ್ಯಾರ್ಥಿಗಳಲ್ಲಿ ಸಂಶೋಧನೆ ಮತ್ತು ಪ್ರಾಯೋಗಿಕ ಕಲಿಕೆ ಬೆಳೆಸುತ್ತದೆ. ವಿದ್ಯಾರ್ಥಿಗಳು ವಿಜ್ಞಾನ ವೇದಿಕೆಯ ಸದ್ಬಳಕೆ ಮಾಡಿಕೊಳ್ಳುವುದರಿಂದ ಪ್ರಶ್ನಿಸುವ, ತಾರ್ಕಿಕ ಮನೋಭಾವ ಹೆಚ್ಚುತ್ತದೆ ಎಂದು ಹೇಳಿದರು. ವಿಜ್ಞಾನ ಸಂಘದ ಸಂಚಾಲಕಿ ಶ್ವೇತಾರವರು ವಿಜ್ಞಾನ ಸಂಘದ ಧ್ಯೇಯೋದ್ದೇಶಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮಯೂರಲಕ್ಷ್ಮಿ, ಅನಿತಾ, ಭಾವನಾ ಭಾರದ್ವಾಜ್, ಪಂಚಮಿ ಮತ್ತು ಸಾಗರಿಕ ಪ್ರಾರ್ಥಿಸಿ, ಫಾಸ್ಟಿನಾ, ಖುಷಿ.ಎಂ.ಗೌಡ ನಿರೂಪಿಸಿ, ಸಾರಿಕಾ ಸೇರಿದಂತೆ ಹಲವರು ಇದ್ದರು.