ಡೆಂಗೀ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ
ಕೋಲಾರ,ಜೂ,೨೯- ರಾಜ್ಯದಲ್ಲಿ ಡೆಂಗ್ಯು ಜ್ವರ ನಿಯಂತ್ರಿಸಲು ಜನತೆಯ ಸಹಕಾರವೂ ಅಗತ್ಯವಿದೆ, ಪ್ರತಿ ಶುಕ್ರವಾರ ನಗರ,ಗ್ರಾಮೀಣ ಪ್ರದೇಶದಲ್ಲಿ ಈ ಮಾರಕ ಕಾಯಿಲೆಗೆ ಕಾರಣವಾದ ಈಡೀಸ್ ಸೊಳ್ಳೆ ಉತ್ಪತ್ತಿಯಾಗುವ ತಾಣಗಳನ್ನು ನಾಶಪಡಿಸುವ ದಿನವನ್ನಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ಕರೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ‘ಡೆಂಗೀ ಜ್ವರ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ ವಾರಕ್ಕೊಂದು ದಿನ ಪ್ರತಿ ಶುಕ್ರವಾರ ಈಡೀಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವ ದಿನವಾಗಿಸೋಣ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರಸ್ತುತ ಮಳೆಗಾಲ ಪ್ರಾರಂಭವಾಗಿದ್ದು ಎಲ್ಲಾ ಕಡೆಗಳಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳಾದ ಡೆಂಗೀ, ಚಿಕುನ್ ಗುನ್ಯಾ, ಮಲೇರಿಯ, ಮೆದುಳು ಜ್ವರ ಮತ್ತು ಆನೆಕಾಲುರೋಗ ಹರಡುವ ಸಾಧ್ಯತೆ ಇರುತ್ತದೆ. ಈ ಎಲ್ಲಾ ರೋಗಗಳು ಸೊಳ್ಳೆಗಳಿಂದ ಹರಡುವಂತಹ ಖಾಯಿಲೆಗಳು. ಮುಖ್ಯವಾಗಿ ಡೆಂಗೀ & ಚಿಕುನ್ ಗುನ್ಯಾ ಸಹ ಒಂದು ಸಾಂಕ್ರಮಿಕ ರೋಗ, ಸೋಂಕಿತ ಈಡೀಸ್‌ಈಜಿಪ್ಟ್ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿಸಿದರು.
ಡೆಂಗೀ ಮತ್ತು ಚಿಕುನ್‌ಗುನ್ಯಾ ಹರಡುವ ಈಡೀಸ್ ಈಜಿಪ್ಟ್ ಸೊಳ್ಳೆಯು ಪ್ರತಿ ದಿನ ಬಳಸುವಂತಹ ನೀರಿನತೊಟ್ಟಿ ಡ್ರಂಗಳಲ್ಲಿ ಮತ್ತು ಮನೆಯ ಸುತ್ತಮುತ್ತ ತ್ಯಾಜ್ಯ ವಸ್ತುಗಳಲ್ಲಿ ಸಂತಾನಾಭಿವೃದ್ದಿ ಮಾಡುತ್ತವೆ. ಆದುದರಿಂದ ದಿನ ಬಳಕೆಯ ತೊಟ್ಟಿ ಮತ್ತು ಡ್ರಂಗಳನ್ನು ವಾರಕ್ಕೊಮ್ಮೆ ತೊಳೆದು ಒಣಗಿಸಿ ಡ್ರೈ ಡೇ ಎಂದು ಆಚರಿಸುವುದು, ನಂತರ ನೀರು ತುಂಬಿಸಿ ಮುಚ್ಚಿಡುವುದು, ಮನೆಯ ಸುತ್ತಮುತ್ತ ಘನ ತ್ಯಾಜ್ಯ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವ ಬಗ್ಗೆ ಕ್ರಮಕೈಗೊಳ್ಳುವುದು.
ಪ್ರಸ್ತುತ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಡೆಂಗೀ ಜ್ವರ ಪ್ರಕರಣಗಳು ಏರಿಕೆಯಾಗುತ್ತಿದ್ದು ಮಳೆಗಾಲ ಹಾಗೂ ನಂತರದ ದಿನಗಳಲ್ಲಿ ರೋಗ ಪ್ರಸರಣವು ಇನ್ನೂ ಹೆಚ್ಚುವ ಸಾಧ್ಯತೆ ಇರುತ್ತದೆ. ಡೆಂಗೀ ಜ್ವರ ನಿಯಂತ್ರಣ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆಯು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸುತ್ತಿದ್ದರೂ ಸಹ ಇತರೆ ಇಲಾಖೆಗಳು ಹಾಗೂ ಸಾರ್ವಜನಿಕರ ಪೂರ್ಣ ಸಹಕಾರದೊಂದಿಗೆ ಡೆಂಗೀ ಜ್ವರ ನಿಯಂತ್ರಣ ಸಾಧ್ಯ ಎಂದ ಅವರು, ಎಲ್ಲಾ ಇಲಾಖೆಗಳು ಸಹಕಾರ ನೀಡಲು ಸೂಚಿಸಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರವಿಕುಮಾರ್ ಮಾತನಾಡಿ, ‘ಪ್ರತಿ ಶುಕ್ರವಾರ ಈಡೀಸ್ ಸೊಳ್ಳೆ ನಿರ್ಮೂಲನಾ ದಿನ’ ಈ ಹಿನ್ನಲೆಯಲ್ಲಿ ಪ್ರತಿ ಸಾರ್ವಜನಿಕರು ಸ್ವತಹ ತಮ್ಮ ಮನೆಗಳು, ಕಚೇರಿಗಳು, ಶಾಲಾ ಕಾಲೇಜುಗಳು, ಇತ್ಯಾದಿಗಳಲ್ಲಿ ನೀರು ತುಂಬುವ ಪರಿಕರಗಳನ್ನು (ಸಿಮೆಂಟ್ ತೊಟ್ಟಿ, ಡ್ರಂ, ಬ್ಯಾರಲ್) ಸ್ವಚ್ಚಗೊಳಿಸುವುದು. ಮಳೆನೀರು ಸಂಗ್ರಹವಾಗುವ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡುವುದರ ಮೂಲಕ ಡೆಂಗೀ ಜ್ವರ ನಿಯಂತ್ರಣ ಕ್ರಮದಲ್ಲಿ ಅತೀ ಮುಖ್ಯವಾದ ಈಡೀಸ್ ಸೊಳ್ಳೆಗಳ ಉತ್ಪತ್ತಿ ತಾಣ ನಾಶಪಡಿಸುವ/ಚಟುವಟಿಕೆಗಳನ್ನು ನಡೆಸಲು ಮನವಿ ಮಾಡಿದರು.
ಆರೋಗ್ಯ ಇಲಾಕೆ ಡೆಂಗೀ ಜ್ವರ ನಿಯಂತ್ರಣ ಕ್ರಮಗಳ ಅನುಷ್ಠಾನದಲ್ಲಿ ಸಾರ್ವಜನಿಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ, ಪ್ರತಿ ಗುರುವಾರ ಲಸಿಕಾ ದಿನವಾಗಿರುವಂತೆ ಪ್ರತಿ ಶುಕ್ರವಾರ ಈಡೀಸ್ ಸೊಳ್ಳೆ ನಿರ್ಮೂಲನಾ ದಿನವನ್ನಾಗಿ ಆಚರಿಸುವುದನ್ನು ಸಾರ್ವಜನಿಕರು ದಿನಚರಿಯ ದೈನಂದಿನ ಅಭ್ಯಾಸ/ಪದ್ದತಿಯನ್ನಾಗಿ ಮಾಡುವುದರ ಮೂಲಕ ವರ್ತನೆಯಲ್ಲಿ ಶಾಶ್ವತ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಈ ಚಟುವಟಿಕೆಯನ್ನು ಅಭಿಯಾನದಂತೆ ಅನುಷ್ಠಾನಗೊಳಿಸಲು ತಿಳಿಸಿದರು.
ಅದೇ ರೀತಿ ಸಾರ್ವಜನಿಕರಿಗೆ ತಮ್ಮ ಮನೆಯ ಒಳಗಡೆ ಹಾಗೂ ಹೊರಗಡೆ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಪ್ರತಿ ಶುಕ್ರವಾರದಂದು ನೀರಿನ ತಾಣಗಳನ್ನು ಸ್ವಚ್ಚಗೊಳಿಸಿ ಡೆಂಗ್ಯೂ ನಿಯಂತ್ರಣ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಸಾರ್ವಜನಿಕರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕುಷ್ಠರೋಗ ನಿವಾರಣಾಧಿಕಾರಿ ಡಾ|| ಎನ್.ಸಿ.ನಾರಾಯಣಸ್ವಾಮಿ, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಪ್ರೇಮ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ರೇಣುಕಾದೇವಿ, ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್, ಇಲಾಖೆಯ ಮಹೇಶ್, ರಘು, ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಸಿಬ್ಬಂದಿಹಾಜರಿದ್ದರು.