ಸೇವಾ ಮನೋಭಾವ ವಿದ್ಯಾರ್ಥಿಗಳ ಬದುಕಿಗೆ ಆಸರೆ
ಗೌರಿಬಿದನೂರು.ಜೂ.೨೯-ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಮುದಾಯದಲ್ಲಿ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡಲ್ಲಿ ಬದುಕಿಗೆ ಆಸರೆಯಾಗಲಿದೆ ಎಂದು ನ್ಯಾಷನಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಡಾ.ಎಚ್.ಎಸ್. ಸುಬ್ರಮಣ್ಯ ತಿಳಿಸಿದರು.
ತಾಲ್ಲೂಕಿನ ಎಚ್.ನಾಗಸಂದ್ರ ಗ್ರಾಮದಲ್ಲಿ ನ್ಯಾಷನಲ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಆಯೋಜಿಸಿದ್ದ ’ ೭ ದಿನಗಳ ವಾರ್ಷಿಕ ವಿಶೇಷ ಶಿಬಿರ’ ದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಬಾಲ್ಯದಿಂದಲೇ ಸೇವಾ ಮನೋಭಾವದ ಜತೆಗೆ ನೆರೆಯ ಪರಿಸರ ಮತ್ತು ನೈಸರ್ಗಿಕ ಸಂಪತ್ತನ್ನು ಉಳಿಸಿ ಬೆಳೆಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕಾಗಿದೆ. ಮುಂದಿನ ಪೀಳಿಗೆಗಾಗಿ ಅಗತ್ಯವಿರುವ ಸಂಪನ್ಮೂಲಗಳನ್ನು ಉಳಿಸುವುದು ಅನಿವಾರ್ಯವಾಗಿದೆ. ಕಳೆದ ಐದಾರು ದಶಕಗಳಿಂದಲೂ ಎನ್ ಇ ಎಸ್ ಸಂಸ್ಥೆಯು ಶೈಕ್ಷಣಿಕ ಪ್ರಗತಿಯ ಜೊತೆಗೆ ಸಮುದಾಯದಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ. ಶಿಬಿರದಲ್ಲಿ ಕಲಿತ ವಿಷಯಗಳು ನಿಮ್ಮೆಲ್ಲರ ಬದುಕಿಗೆ ಆಸರೆಯಾಗಲಿವೆ ಎಂದು ಹೇಳಿದರು.
ಎನ್ ಇಎಸ್ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ವಿ.ವೆಂಕಟಶಿವಾರೆಡ್ಡಿ ಮಾತನಾಡಿ, ಕಾಲೇಜು ಹಂತದಲ್ಲಿ ನಡೆಯುವ ಎನ್ ಎಸ್ ಎಸ್ ಶಿಬಿರಗಳು ವಿದ್ಯಾರ್ಥಿಗಳ ಬದುಕಿಗೆ ಸಾಕಷ್ಟು ಅನುಭವ ನೀಡುತ್ತವೆ. ಸಮುದಾಯದಲ್ಲಿ ಬೆರೆತು ಬಾಳುವ ಜತೆಗೆ ಶಿಸ್ತು ಮತ್ತು ಸಂಯಮವನ್ನು ನೀಡುತ್ತದೆ. ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಅನುಭವ ಪಡೆಯುವುದು ನಿಜಕ್ಕೂ ನಿಮ್ಮೆಲ್ಲರ ಬದುಕಿಗೆ ಸ್ಫೂರ್ತಿ ನೀಡುತ್ತದೆ. ಎನ್ ಇ ಎಸ್ ಸಂಸ್ಥೆಯು ಡಾ.ಎಚ್.ನರಸಿಂಹಯ್ಯ ರವರ ಮಾರ್ಗದರ್ಶನದಲ್ಲಿ ಆರಂಭದಿಂದಲೂ ಇಂತಹ ಶಿಬಿರಗಳನ್ನು ಆಯೋಜನೆ ಮಾಡುತ್ತಿದೆ. ಈ ಬಾರಿಯ ಶಿಬಿರದಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ಎಚ್.ನಾಗಸಂದ್ರದ ಗ್ರಾಮದಲ್ಲಿ ೭ ದಿನಗಳ ಸೇವೆ ಮುಗಿಸಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಎನ್.ಇ.ಎಸ್ ಆಡಳಿತ ಮಂಡಳಿಯ ಛೇರ್ಮನ್ ಮುದುಗೆರೆ ನಾಗರಾಜಪ್ಪ, ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಪಿ.ವಿ.ವೆಂಕಟಸ್ವಾಮಿ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಸ್.ಗಾಯತ್ರಿ, ಉಪ ಪ್ರಾಂಶುಪಾಲೆ ಪ್ರೊ.ಬಿ.ನೇತ್ರ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಟಿ.ಜಯರಾಮ್, ಉಪ ಪ್ರಾಂಶುಪಾಲರಾದ ಪ್ರೊ.ಟಿ.ನಂಜುಂಡಪ್ಪ, ಶಾಲೆಯ ಮುಖ್ಯ ಶಿಕ್ಷಕರಾದ ಕೆ.ಎಸ್.ಮಹೇಶ್, ಉಪನ್ಯಾಸಕರಾದ ನಿಜಾಮುದ್ದೀನ್, ಶಿಬಿರಾಧಿಕಾರಿ ಎಸ್.ಶ್ರೇಯಸ್ ಭಾಗವಹಿಸಿದ್ದರು.