ಮಾದಕ ವಸ್ತುಗಳಿಗೆ ವಿದ್ಯಾರ್ಥಿಗಳೇ ಹೆಚ್ಚು ಬಲಿ
ಚಿಕ್ಕಬಳ್ಳಾಪುರ, ಜೂ.೨೯- ಮಾದಕ ವಸ್ತುಗಳ ಸೇವನೆ ಮಾನವನ ಸಹಜ ಜೀವನಕ್ಕೆ ವಿರುದ್ಧವಾಗಿದ್ದು, ಅವುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಇವುಗಳಿಗೆ ವಿದ್ಯಾರ್ಥಿ ಯುವಜನರೇ ಅತಿ ಹೆಚ್ಚು ಬಲಿಯಾಗುತ್ತಿರುವ ಖೇದಕರ ಸಂಗತಿ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನೇರಳೆ ವೀರಭದ್ರಯ್ಯ ಭವಾನಿ ಅವರು ಕಳವಳ ವ್ಯಕ್ತಪಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಗುರುವಾರ ಚಿಕ್ಕಬಳ್ಳಾಪುರ ಹೊರವಲಯದ ನಂದಿ ವೈದ್ಯಕೀಯ ವಿಜ್ಣಾನಗಳ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರಂಭದಲ್ಲಿ ಮಾದಕ ವಸ್ತುಗಳಿಗೆ ಆಕರ್ಷಿತರಾಗುವ ವಿದ್ಯಾರ್ಥಿ ಯುವಜನರು ನಂತರದ ದಿನಗಳಲ್ಲಿ ಅವುಗಳನ್ನು ಚಟವಾಗಿಸಿಕೊಂಡು ಅವುಗಳ ದಾಸರಾಗುತ್ತಾರೆ. ಮಾದಕ ವಸ್ತುಗಳ ಸೇವನೆ ಬಗ್ಗೆ ಯುವಜನರಲ್ಲಿ ಹಲವು ತಪ್ಪು ಕಲ್ಪನೆಗಳಿದ್ದು, ಮಾದಕ ವಸ್ತುಗಳ ಸೇವನೆ ಜೀವನ ಶೈಲಿಯನ್ನು ಬದಲಿಸುತ್ತದೆ ಮತ್ತು ಒತ್ತಡ ಕಡಿಮೆ ಮಾಡುತ್ತದೆ ಎಂಬ ಕಲ್ಪನೆಗಳಲ್ಲಿ ಯಾವುದೇ ಅರ್ಥವಿಲ್ಲ. ಮಾದಕ ವಸ್ತುಗಳ ಸೇವನೆ, ಬಳಕೆ, ಸರಬರಾಜು ಮತ್ತು ಸಾಗಾಣಿಕೆ ಕಾನೂನು ಬಾಹಿರ ಮಾತ್ರವಲ್ಲದೇ, ಶಿಕ್ಷಾರ್ಹ ಅಪರಾಧವೂ ಆಗಿದೆ. ವಿದ್ಯಾರ್ಥಿ ಯುವಜನರ ಬದುಕು, ಭವಿಷ್ಯವನ್ನೇ ಕತ್ತಲಾಗಿಸುವ ಜೊತೆಗೆ ಪೋಷಕರ ಕನಸುಗಳನ್ನು ನುಚ್ಚು ನೂರಾಗಿಸುವ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿದ ಸದಸ್ಯ ಕಾರ್ಯದರ್ಶಿಗಳಾದ ಎಚ್.ಕೆ.ಉಮೇಶ್ ಅವರು ಮಾತನಾಡಿ, ವಿದ್ಯಾವಂತರೇ ಅನೇಕ ಕಾರಣಗಳಿಂದ ಈ ಅಭ್ಯಾಸಗಳಿಗೆ ಬಲಿಯಾಗುತ್ತಿದ್ದಾರೆ ಅದರಲ್ಲೂ ವಿದ್ಯಾರ್ಥಿ ಸಮುದಾಯ ಬಲಿಯಾಗುತ್ತಿರುವುದು ಕಳವಳಕಾರಿ ಎಂದು ತಿಳಿಸಿದರು.
ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ. ಎಂ.ಎಲ್. ಮಂಜುನಾಥ್ ಮಾತನಾಡಿದರು.
ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ರಾಜಾ ಇಮಾಮ್ ಖಾಸೀಂ ಅವರು ಮಾತನಾಡಿ, ಪ್ರತಿದಿನ ಸರಾಸರಿ ನಾಲ್ಕು ಜನರಂತೆ, ವರ್ಷಕ್ಕೆ ೪ ಸಾವಿರ ಜನರು ಮಾದಕ ವಸ್ತುಗಳ ಸೇವನೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಆರ್.ಶ್ರೀನಿವಾಸ್ ಅವರು ಮಾತನಾಡಿದರು.ಇದೇ ಸಂದರ್ಭದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಅರೆ ವೈದ್ಯಕೀಯ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆ ಮತ್ತು ಸಾಗಾಣಿಕೆ ವಿರೋಧಿ ದಿನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಶಿವಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುಳ, ಮೆಡಿಕಲ್ ಕಾಲೇಜಿನ ಫಿಸಿಯಾಲಜಿ ವಿಭಾಗ ಮುಖ್ಯಸ್ಥ ಡಾ.ಸುರೇಶ್ ನಾಯಕ್, ವೈದ್ಯರಾದ ಡಾ.ಶಂಕರಪ್ಪ, ಡಾ.ಅರ್ಜುನ್ ಬಹದ್ದೂರ್, ಡಾ.ಅನಿತ, ಡಾ.ಸಂದೀಪ್, ನಸಿಂಗ್ ಕಾಲೇಜಿನ ಪ್ರಾಂಶುಪಾಲೆ ಶಾಂತಿ, ಮನೋವೈದ್ಯರಾದ ಡಾ.ಜಿ.ಹೇಮಂತ್ ಕುಮಾರ್,ಡಾ.ಎ.ಲಾವಣ್ಯ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಹರೀಶ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
೯೪೮೩ ವ್ಯಸನಿಗಳಿಗೆ ಚಿಕಿತ್ಸೆ
ಏಪ್ರಿಲ್ ೨೦೨೩ ರಿಂದ ಮಾರ್ಚ್ ೨೦೨೪ ವರಗೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಒಟ್ಟು ೯೪೮೩ ವ್ಯಸನಿಗಳಿಗೆ ಚಿಕಿತ್ಸೆ ನೀಡಲಾಗಿದೆ, ಈ ಪೈಕಿ ಮದ್ಯಪಾನ ವ್ಯಸನ ೬,೭೩೧, ತಂಬಾಕು ವ್ಯಸನ ೨,೭೨೪, ಗಾಂಜಾ ವ್ಯಸನ ೨೧ ಹಾಗೂ ಬೆಂಜೋಡಯಜಿಪೈನ್ ವ್ಯಸನಕ್ಕೆ ಒಳಗಾಗಿದ್ದ ೭ ಮಂದಿಗೆ ಚಿಕಿತ್ಸೆ ನೀಡಲಾಗಿದೆ ಎಂದು ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನೇರಳೆ ವೀರಭದ್ರಯ್ಯ ಭವಾನಿ ಸಲಹೆ ನೀಡಿದರು.