ಜಾನಪದ ಸಂಪತ್ತು ರಕ್ಷಿಸಿ-ಉಳಿಸಲು ಕರೆ
ಕುಣಿಗಲ್, ಜೂ. ೨೯- ಮೌಖಿಕ ಪರಂಪರೆಯ, ನೆಲಮೂಲ ಸಂಸ್ಕೃತಿಯ ತಾಯಿ ಬೇರಾದ ಜಾನಪದ ಸಂಪತ್ತನ್ನು ಮುಂದಿನ ತಲೆಮಾರಿಗೆ ಸಂರಕ್ಷಿಸಿ ರವಾನಿಸಬೇಕಾದ ಅಗತ್ಯತೆ ಇದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಲಧಿಗೆರೆ ಗಂಗಹುಚ್ಚಮ್ಮ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಸಮಿತಿ ಹಾಗೂ ಐಕ್ಯೂಎಸಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಜನಪದ ಗೀತೆ ಸ್ಪರ್ಧೆ ಪರಂಪರಾ ದಿನ, ಆಹಾರ ಮೇಳ ಹಾಗೂ ಜಾನಪದ ವಸ್ತು ಪ್ರದರ್ಶನ -೨೦೨೪ರ ಕಾರ್ಯಕ್ರಮವನ್ನು ರಾಗಿ ಬೀಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ-ತಂತ್ರಜ್ಞಾನದ ನಾಗಾಲೋಟದಲ್ಲಿ ಸಾಗುತ್ತಿರುವ ಇಂದಿನ ಯುವ ಜನತೆಗೆ ನೈತಿಕ ಮತ್ತು ಜಾನಪದದಲ್ಲಿನ ಮೌಲ್ಯಗಳನ್ನು ತಿಳಿಸುವ ಅಗತ್ಯತೆ ಇದ್ದು, ಇಂದಿನ ಯುವ ಜನಾಂಗವನ್ನು ಜಾನಪದ ಗೀತೆಯ ಕಡೆಗೆ ಕರೆದುಕೊಂಡು ಹೋಗುತ್ತಿರುವುದು ಈ ಕಾರ್ಯಕ್ರಮದ ಹೆಗ್ಗಳಿಕೆ ಮತ್ತು ಶ್ರೇಷ್ಠತೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಪ್ರೊ. ಮಾಯಾಸಾರಂಗಪಾಣಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯ ಭಾಗವಾಗಿ ಅವರ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವ ಮತ್ತು ಜಾನಪದ ಸಾರಸ್ವತ ಲೋಕವನ್ನು ಪರಿಚಯಿಸುವ ಈ ಕಾರ್ಯಕ್ರಮ ವಿಶೇಷವಾದದ್ದು ಎಂದರು.
ರಾಜ್ಯಮಟ್ಟದ ಜನಪದ ಗೀತೆ ಸ್ಪರ್ಧೆಗೆ ರಾಜ್ಯದ ಸುಮಾರು ೧೭ ಕಾಲೇಜುಗಳ ೨೭ ಸ್ಪರ್ಧಾಳುಗಳು ಭಾಗವಹಿಸಿದ್ದರು. ಮೊದಲ ಬಹುಮಾನವಾಗಿ ೫೦೦೦ ರೂ. ಗಳನ್ನು ಕುಣಿಗಲ್ ಪ್ರಥಮ ದರ್ಜೆ ಕಾಲೇಜಿನ ನಿವೇದಿತ, ದ್ವಿತೀಯ ಬಹುಮಾನ ೩೦೦೦ ರೂಗಳನ್ನು ತುಮಕೂರಿನ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ವರ್ಷಿಣಿ ಹಾಗೂ ತೃತೀಯ ಬಹುಮಾನವನ್ನು ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನ ಧನುಷ್ ಪಡೆಯುವುದರೊಂದಿಗೆ ಪಾರಿತೋಷಕವನ್ನು ತಮ್ಮದಾಗಿಸಿಕೊಂಡರು. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಇದರ ಅಂಗವಾಗಿ ಪರಂಪರಾದಿನ ಮತ್ತು ಎಲ್ಲ ವಿದ್ಯಾರ್ಥಿಗಳು ಆಹಾರ ಮೇಳದಲ್ಲಿ ತುಂಬಾ ಉತ್ಸಾಹದಿಂದ ಪಾಲ್ಗೊಂಡು ೩೭ ಅಂಗಡಿ ಮಳಿಗೆಗಳನ್ನು ಹಾಕಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದು ವಿಶೇಷವಾಗಿತ್ತು.
ಸಾಂಸ್ಕೃತಿಕ ಸಮಿತಿಯ ಸಂಚಾಲಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಗೋವಿಂದರಾಯ ಎಂ. ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಶಶಿಕುಮಾರ್, ಹಿರಿಯ ಜಾನಪದ ಗಾಯಕರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಿರಿವರ ಶಿವರಾಮಯ್ಯ ಸೇರಿದಂತೆ ಸಂಗೀತ ಪ್ರೋತ್ಸಾಹಕರು, ಹಿರಿಯ ಶಿಕ್ಷಕಿ ಗೀತಾಂಜಲಿ, ಪ್ರಾಧ್ಯಾಪಕ ರಾಮಾಂಜನಪ್ಪ, ಐಕ್ಯೂಎಸಿ ಸಂಚಾಲಕ ಡಾ. ಜೆ. ಶಿವಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಜಿ ಎಸ್ ರವೀಶ್, ಹನುಮಂತಪ್ಪ, ಡಾ. ಶ್ರೀನಿವಾಸ್, ಮೈಲಾರಯ್ಯ ಪಿ.ಎಲ್., ಡಾ. ಗಿರಿಜಾಂಬ ಕೆ.ಎನ್., ರುಕ್ಮಿಣಿ ವಿ, ಡಾ. ಮಮತಾ, ಡಾ. ಧರಣೇಶ್, ನಾರಾಯಣದಾಸ್, ಗಂಗಾಧರ್, ಸುರೇಶ್, ಸತೀಶ್‌ಕುಮಾರ್, ನಾಗಮಣಿ, ಡಾ. ರಾಧಾಕೃಷ್ಣ, ಶ್ರೀನಿವಾಸಪ್ರಭು ಮತ್ತಿತರರು ಭಾಗವಹಿಸಿದ್ದರು.