ಕೆರೆಕಟ್ಟೆಕಟ್ಟುವ ದೂರದೃಷ್ಟಿ ಶ್ಲಾಘನೀಯ-ಸುರೇಶ್
ಕೋಲಾರ,ಜೂ,೨೯- ಸುಮಾರು ೫೦೦ ವರ್ಷಗಳ ಹಿಂದೆಯೇ ನಗರವೊಂದರ ನಿರ್ಮಾಣ, ಜನಸಮುದಾಯಕ್ಕಾಗಿ ಕೆರೆಗಳ ಕಟ್ಟುವ ಕಾಯಕ ಮಾಡಿದ ಕೆಂಪೇಗೌಡರು ನಮಗೆ ಆದರ್ಶವಾಗಿದ್ದಾರೆ ಎಂದು ತಾಲ್ಲೂಕಿನ ಸೂಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ತಿಳಿಸಿದರು.
ಸೂಲೂರು ಗ್ರಾಮ ಪಂಚಾಯತಿ ಕಚೇರಿಯಲ್ಲಿ ೫೧೫ ಕೆಂಪೇಗೌಡ ಜಯಂತಿ ಅಂಗವಾಗಿ ನಾಡಪ್ರಭುವಿನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ರೈತರಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ, ನೀರಿನ ಸೌಕರ್ಯ ಕಲ್ಪಿಸಿಕೊಟ್ಟರೆ ರೈತರು ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂಬುದನ್ನು ಕೆಂಪೇಗೌಡರು ಅಂದೇ ಅರಿತು ಕಾರ್ಯಗತಗೊಳಿಸಿದ್ದರು ಎಂದ ಅವರು, ಅವರು ಕಟ್ಟಿದ ಕೆರೆಗಳಲ್ಲಿ ಇಂದು ಹಲವಾರು ಮುಚ್ಚಿಹೋಗಿದ್ದು, ಪ್ರಕೃತಿ ವಿಕೋಪಕ್ಕೆ ಬೆಂಗಳೂರು ಒಳಗಾಗಿದೆ ಎಂದರು.
ಒಕ್ಕಲುತನ ಮಾಡುವ ರೈತರು ಚೆನ್ನಾಗಿದ್ದರೆ ಎಲ್ಲವೂ ಸಾಧ್ಯ. ಆದರೆ ರೈತನ ಬೆನ್ನುಮೂಳೆ ಮುರಿದು ಹೋದರೆ, ದುರ್ಬಲರಾದರೆ ಯಾರ ಜಯಂತಿ ಮಾಡಲು ಸಾಧ್ಯವಾಗುತ್ತದೆ? ಹಾಗಾಗಿ ರೈತರ ಬೆನ್ನುಮೂಳೆಯನ್ನು ಗಟ್ಟಿ ಮಾಡಿ, ರೈತರ ಬದುಕನ್ನು ಹಸನು ಮಾಡಲು ಸರಕಾರ, ಜನಪ್ರತಿನಿಧಿಗಳು ಮುಂದಾಗಬೇಕು, ಕೃಷಿಗೆ ಒತ್ತು ನೀಡುವುದೇ ನಾಡಪ್ರಭುವಿಗೆ ಗೌರವ ನೀಡಿದಂತೆ ಎಂದರು.
ಕೆಂಪೇಗೌಡರು ಕೇವಲ ಒಕ್ಕಲಿಗ ಸಮುದಾಯಕ್ಕಷ್ಟೇ ಸೇವೆ ಮಾಡಿರುವವರಲ್ಲ. ನಗರವನ್ನು ಈ ರೀತಿ ಕಟ್ಟಿದರೆ ಅಭಿವೃದ್ಧಿಯಾಗುತ್ತದೆ ಎನ್ನುವ ದೂರದೃಷ್ಠಿಯನ್ನು ೫೦೦ ವರ್ಷಗಳ ಹಿಂದೆಯೇ ಹೊಂದಿದ್ದ ಅವರು, ಯಾವುದೇ ತಂತ್ರಜ್ಞಾನವಿಲ್ಲದೆಯೇ ಮಹಾನಗರ ಬೆಂಗಳೂರನ್ನು ನಿರ್ಮಿಸಿದ್ದು, ಇಂದು ಇಡೀ ವಿಶ್ವವೇ ಬೆರಗಾಗಿ ನೋಡುವಂತಾಗಿದೆ ಎಂದರು.
ವಜ್ರ ವೈಡೂರ್ಯಗಳನ್ನು ತರಕಾರಿಯಂತೆಯೇ ವಿಜಯನಗರ ಸಾಮ್ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದಾಗ ಕೆಂಪೇಗೌಡರ ತಂದೆಯು ಅಲ್ಲಿ ಸೇವೆ ಸಲ್ಲಿಸಿದ್ದರು. ಅದೇ ಹಾದಿಯಾಗಿ ಬೆಂಗಳೂರನ್ನು ಎಲ್ಲ ಸಮಾಜದವರಿಗೆ ಅವರವರ ವೃತ್ತಿಗೆ ಅನುಗುಣವಾಗಿ, ವ್ಯಾಪಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಕೆಂಪೇಗೌಡರು ಪೇಟೆ,ಬಡಾವಣೆಗಳನ್ನು ನಿರ್ಮಿಸಲು ಪಣ ತೊಟ್ಟಿದ್ದು, ಅಂತಹ ವ್ಯಕ್ತಿಯ ಸ್ಮರಣೆ ಹೆಗ್ಗಳಿಕೆಯ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಕೆಂದಟ್ಟಿ ನಾರಾಯಣಸ್ವಾಮಿ,ಕೆಪಿಎಂ ಅಶೋಕ, ಸೂಲೂರು ಮುನಿರೆಡ್ಡಿ. ಕೆಂದಟ್ಟಿ ಮೇಷ್ಟ್ರು ನಾರಾಯಣಸ್ವಾಮಿ, ಮಾಲತೇಶ್, ತಲಗುಂದ ನರಸಾಬಾಬು, ಸುಜಾತಮ್ಮ, ವೆಂಕಟೇಶಪ್ಪ, ಗರುಡನಹಳ್ಳಿ ಲೋಕೇಶ್, ನಾಗರಾಜ್ ಹಾಗೂ ಗ್ರಾಪಂ ಪಿಡಿಒ ಬಾಲಾಜಿ, ಪ್ರದೀಪ್ ಹಾಗೂ ಪಂಚಾಯತಿಯ ಎಲ್ಲ ಸಿಬ್ಬಂದಿ ಹಾಜರಿದ್ದರು.