ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಆದ್ಯತೆ-ಡಿ.ಟಿ.ಶ್ರೀನಿವಾಸ್
ಕೋಲಾರ,ಜೂ,೨೯- ಶಿಕ್ಷಕರ ಋಣ ತೀರಿಸುವ ಹೊಣೆ ನನ್ನದಾಗಿದೆ, ಮತ ಹಾಕಿದವರಿಗೆ ನ್ಯಾಯ ಒದಗಿಸುವ ಕೆಲಸ ಮಾಡುವೆ ಸದನದ ಒಳಗೆ,ಹೊರತೆ ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ದುಡಿಯುವೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ನೂತನ ಸದಸ್ಯ ಡಿ.ಟಿ.ಶ್ರೀನಿವಾಸ್ ಭರವಸೆ ನೀಡಿದರು.
ವಿಧಾನಪರಿಷತ್ ಆಯ್ಕೆಯಾದ ಹಿನ್ನಲೆಯಲ್ಲಿ ಕೆಆರ್.ಪುರಂನ ತಮ್ಮ ನಿವಾಸದಲ್ಲಿ ಜಿಲ್ಲಾ ವೃತ್ತಿಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಯ, ನಿವೃತ್ತ ಶಿಕ್ಷಕ ಬಂಗವಾದಿ ನಾಗರಾಜ್, ರೋಣೂರು ಶಿಕ್ಷಕ ಅಶೋಕ್ ನೇತೃತ್ವದಲ್ಲಿ ಶ್ರೀನಿವಾಸಪುರ ತಾಲ್ಲೂಕಿನ ಶಿಕ್ಷಕರು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
೭ನೇ ವೇತನ ಆಯೋಗದ ವರದಿ ಜಾರಿಗೆ ನಮ್ಮ ಸರ್ಕಾರ ಬದ್ದವಾಗಿದೆ, ಈಗಾಗಲೇ ಇದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ ಎಂದ ಅವರು, ಇದರ ಜತೆಗೆ ಎನ್‌ಪಿಎಸ್ ರದ್ದತಿ ಕುರಿತು ಕಳೆದ ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲೇ ಭರವಸೆ ನೀಡಿದ್ದು, ಅದರ ಜಾರಿಗೂ ಸರ್ಕಾರ ಕ್ರಮವಹಿಸಲಿದೆ ಎಂದು ತಿಳಿಸಿದರು.
ಜೆಒಸಿ ಶಿಕ್ಷಕರ ಸಮಸ್ಯೆ, ಶಿಕ್ಷಕರು ವೇತನ ತಾರತಮ್ಯ, ಬಡ್ತಿ ಸಮಸ್ಯೆ, ಕಾಲ್ಪನಿಕ ವೇತನ ಸಮಸ್ಯೆ, ಅನುದಾನ ರಹಿತ ಶಾಲೆಗಳ ಶಿಕ್ಷಕರು ಸೇವಾ ಅಭದ್ರತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಎಲ್ಲ ಸಮಸ್ಯೆಗಳನ್ನು ಒಮ್ಮೆಲೆ ಪರಿಹರಿಸಲು ಅಸಾಧ್ಯವಾದರೂ ಕೈಲಾದಷ್ಟು ಸಮಸ್ಯೆಗಳ ಪರಿಹಾರಕ್ಕೆ ಶಕ್ತಿ ಮೀರಿ ಶ್ರಮಿಸುವೆ ಎಂದರು.