ಮಾದಕ ವಸ್ತುಗಳ ಸೇವನೆಯಿಂದ ಸಾವಿಗೆ ಆಹ್ವಾನ
ಕೋಲಾರ,ಜೂ,೨೯-ಇತ್ತೀಚಿನ ದಿನಗಳಲ್ಲಿ ಯುವಕರು ಮಾದಕ ವಸ್ತುಗಳಿಗೆ ದಾಸರಾಗಿ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಹೇಳಿದರು.
ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ದೇವರಾಜ ಅರಸು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ ಮಾತನಾಡಿ, ಯುವಜನತೆ ಮೋಜು, ಮಸ್ತಿ, ತಡರಾತ್ರಿಯ ಪಾರ್ಟಿ ಎಂದು ಜೀವನ ಶೈಲಿಯನ್ನೇ ಬದಲಾಯಿಸಿಕೊಂಡಿದೆ. ಇದರಿಂದ ಹದಿಹರೆಯದ ವಯಸ್ಸಿನಲ್ಲಿ ಹಾದಿ ತಪ್ಪುವುದು ಸಾಮಾನ್ಯವಾಗಿ ಬಿಟ್ಟಿದೆ. ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣೆ ಕಾನೂನ ಬಾಹಿರ ಚಟುವಟಿಕೆಯೆಂದು ತಿಳಿದಿದ್ದರೂ ಇದರಲ್ಲಿ ತೊಡಗಿಸಿಕೊಂಡಿರುವ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ. ಡ್ರಗ್ ಮಾಫಿಯಾ ಹತೋಟಿಗೆ ವಿಶ್ವದೆಲ್ಲೆಡೆ ಕಾನೂನು ಪ್ರಯತ್ನಗಳು ನಡೆದರೂ ಬುಡ ಸಮೇತ ಕಿತ್ತು ಹಾಕಲು ಸಾಧ್ಯವಾಗಿಲ್ಲ. ಈ ಕುರಿತು ಪ್ರತಿಯೊಬ್ಬರೂ ಜಾಗೃತಿ ಹೊಂದಿ ವಿಶ್ವವನ್ನು ಮಾದಕವಸ್ತುಗಳಿಂದ ಮುಕ್ತವಾಗಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.
ಡಿವೈಎಸ್‌ಪಿ ನಾಗ್ತೆ, ಅರಸು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ಪ್ರಭಾಕರ್, ಮನೋಶಾಸ್ತ್ರ ವಿಭಾಗದ ಮುಖ್ಯಸ್ಥ ಮೋಹನ್‌ರೆಡ್ಡಿ, ರಿಜಿಸ್ಟ್ರಾರ್ ಪ್ರಸಾದ್, ಆಸ್ಪತ್ರೆ ಅಧೀಕ್ಷಕ ಜೆ.ಕೃಷ್ಣಪ್ಪ ಉಪಸ್ಥಿತರಿದ್ದರು.