ಅರಾಭಿಕೊತ್ತನೂರು ಪ್ರೌಢಶಾಲೆಯಲ್ಲಿ ಆಟೋಮೊಬೈಲ್ ತರಬೇತಿ
ಕೋಲಾರ,ಜೂ,೨೯:ಪ್ರೌಢಶಾಲೆಯಲ್ಲೇ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಸ್ವಾವಲಂಬಿ ಬದುಕಿಗಾಗಿ ವಿವಿಧ ಕೌಶಲ್ಯ ಕಲಿಸುವ ಪ್ರಯತ್ನವಾಗಿ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿನ ಅಡಿಯಲ್ಲಿ ಆಟೋಮೊಬೈಲ್ ತರಬೇತಿ ನೀಡಲು ಕ್ರಮವಹಿಸಲಾಗಿದೆ ಎಂದು ಎನ್‌ಎಸ್‌ಕ್ಯೂಎಫ್ ವೃತ್ತಿಶಿಕ್ಷಣ ಸಂಯೋಜಕಿ ದೀಪಿಕಾ ತಿಳಿಸಿದರು.
ಶಾಲೆಯಲ್ಲಿ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಅವರು,ಕೇಂದ್ರ ಸರ್ಕಾರದ ಯೋಜನೆಯಡಿ ರಾಜ್ಯದ ೩೦೦ ಶಾಲೆಗಳಲ್ಲಿ ಕೋರ್ಸ್ ಆರಂಭಗೊಳ್ಳಲಿದೆ. ಕೋಲಾರ ಜಿಲ್ಲೆಯ ಐದು ಶಾಲೆಗಳು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು ಅಡಿಯಲ್ಲಿ ವಿವಿಧ ವೃತ್ತಿ ಕೌಶಲ ತರಬೇತಿ ನೀಡಲು ಆಯ್ಕೆಯಾಗಿದ್ದು, ಅರಾಭಿಕೊತ್ತನೂರಿನಲ್ಲಿ ಆಟೋಮೊಬೈಲ್ ತರಬೇತಿ ನೀಡಲಿದ್ದು, ಅಗತ್ಯ ಪರಿಕರಗಳೊಂದಿಗೆ ಸುಸಜ್ಜಿತ ಪ್ರಾಯೋಗಿಕ ಕೋಣೆ ಸಿದ್ದಗೊಳ್ಳಲಿದೆ ಎಂದರು.
ಜಿಲ್ಲೆಯಲ್ಲಿ ಅರಾಭಿಕೊತ್ತನೂರು, ಕ್ಯಾಲನೂರು,ವೇಮಗಲ್, ಮಾಸ್ತಿ, ಸುಂದರಪಾಳ್ಯ ಪ್ರೌಢಶಾಲೆಗಳು ಕೌಶಲ್ಯ ಅರ್ಹತಾ ಚೌಕಟ್ಟಿನಲ್ಲಿ ಆಯ್ಕೆಯಾಗಿದ್ದು, ಈ ಶಾಲೆಗಳಲ್ಲಿ ಈಶೈಕ್ಷಣಿಕ ಸಾಲಿನಲ್ಲೇ ಕೌಶಲ್ಯ ತರಬೇತಿ ಕೋರ್ಸು ಆರಂಭಗೊಳ್ಳಲಿದೆ ಎಂದರು.
ಪ್ರೌಢಶಾಲೆಯಲ್ಲಿ ೯ನೇ ತರಗತಿಯಿಂದ ೧೧ ನೇ ತರಗತಿವರೆಗೂ ಕೇಂದ್ರ ಸರ್ಕಾರ ಮಕ್ಕಳಿಗೆ ವೃತ್ತಿಕೌಶಲ ಕಲಿಸಿಕೊಡಲು ಈ ತರಬೇತಿ ನೀಡುತ್ತಿದೆ, ಇಲ್ಲಿ ತೃತೀಯ ಭಾಷೆ ಕಲಿಯಲು ಆಸಕ್ತಿ ಇಲ್ಲದ ಮಕ್ಕಳಿಗೆ ಆಟೋಮೊಬೈಲ್ ಶಿಕ್ಷಣ ನೀಡಲಾಗುತ್ತದೆ ಎಂದರು.
ದ್ವಿಚಕ್ರವಾಹನ, ಕಾರು ಮತ್ತಿತರ ಆಟೋಮೊಬೈಲ್ ಉಪಕರಣಗಳನ್ನು ರಿಪೇರಿ,ಜೋಡಿಸುವ ತಂತ್ರಜ್ಞಾನವನ್ನು ಇಲ್ಲಿ ಪ್ರಾಯೋಗಿಕವಾಗಿ ಮಕ್ಕಳಿಗೆ ಕಲಿಸುವುದರಿಂದ ಅವರಿಗೆ ಕೈಗಾರಿಕಾ ಪ್ರದೇಶದಲ್ಲಿ ಮುಂದೆ ಉದ್ಯೋಗ ಪಡೆಯಲು ಸಹಕಾರಿಯಾಗಲಿದೆ ಮತ್ತು ಸ್ವಾವಲಂಬಿ ಜೀವನಕ್ಕಾಗಿ ಅವರು ಸ್ವತಃ ವರ್ಕ್‌ಶಾಪ್, ಆಟೋಮೊಬೈಲ್ ಸಲಕರಣೆಗಳ ಮಾರಾಟಕ್ಕೆ ಅಂಗಡಿ ಆರಂಭ ಮತ್ತಿತರ ಸ್ವಯಂ ಉದ್ಯೋಗ ಚಟುವಟಿಕೆ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದರು. ಕಲಿಕೆಗೆ ಅಗತ್ಯವಾದ ಪ್ರಾಯೋಗಿಕ ಸಲಕರಣೆಗಳು, ನುರಿತ ಶಿಕ್ಷಕರನ್ನು ಎನ್‌ಎಸ್‌ಕ್ಯೂಎಫ್ ಒದಗಿಸಲಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲು ಕೋರಿದರು.
ಮುಖ್ಯಶಿಕ್ಷಕಿ ತಾಹೇರಾ ನುಸ್ರತ್ ಮಾತನಾಡಿ, ಸರ್ಕಾರಿ ಕೆಲಸ ಸಿಗದಿದ್ದರೂ ಬದುಕು ಕಟ್ಟಿಕೊಳ್ಳಲು ನಿಮಗೆ ಪ್ರೌಢಶಾಲಾ ಹಂತದಲ್ಲೇ ಆಟೋಮೊಬೈಲ್ ತರಬೇತಿ ಪಡೆಯುವ ಅವಕಾಶ ಸಿಗಲಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಆಟೋಮೊಬೈಲ್ ವಿಭಾಗದ ನರಸಾಪುರ ಶಾಲೆಯ ಶಿಕ್ಷಕ ಹರೀಶ್, ಶಾಲೆಯ ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ಸುಗುಣಾ, ಲೀಲಾ,ಫರೀದಾ, ವೆಂಕಟರೆಡ್ಡಿ, ಶ್ರೀನಿವಾಸಲು,ರಮಾದೇವಿ, ಚಂದ್ರಶೇಖರ್ ಮತ್ತಿತರರಿದ್ದರು.