ಕಚೇರಿಗೆ ಮನೆಯ ಸಮಸ್ಯೆ ಒಯ್ಯಬೇಡಿ-ಡಿಸಿ
ಕೋಲಾರ, ಜೂ, ೨೯-ಆಡಳಿತ ಯಂತ್ರದ ಚುಕ್ಕಾಣಿ ಹಿಡಿದ ಪ್ರಥಮ ಪ್ರಜೆಯಿಂದ ಪ್ರಾರಂಭವಾಗಿ, ಗ್ರೂಪ್ ’ಡಿ’ ದರ್ಜೆಯ ನೌಕರನವರೆಗೆ, ಶಾಸಕಾಂಗ ಮತ್ತು ಕಾರ್ಯಾಂಗದ, ವಿವಿಧ ಸ್ತರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಒತ್ತಡದಿಂದ ಕಾರ್ಯನಿರ್ವಹಿಸುತ್ತಿರುವವರೆ ಅಗಿದ್ದಾರೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅಭಿಪ್ರಾಯ ಪಟ್ಟರು.
ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ ಕೋಲಾರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಒತ್ತಡ ನಿರ್ವಹಣೆ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಹಾಗೂ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಣೆ ವಿರೋಧಿ ಸಪ್ತಾಹ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ವೈಯುಕ್ತಿಕ ಜೀವನದಲ್ಲಿ ನೋಡಿದಾಗ, ಬೆಳಗ್ಗೆ ಮನೆ ಮುಂದೆ ಬಂದು ಕಸವನ್ನು ಸ್ವೀಕರಿಸುವ ಪೌರಕಾರ್ಮಿಕನಿಂದ ಪ್ರಾರಂಭವಾಗಿ, ಪ್ರತಿದಿನ ನೂರಾರು ಕೋಟಿ ವ್ಯವಹಾರ ನಡೆಸುವ ಸಿರಿವಂತ ವ್ಯಕ್ತಿ ಸಹ ಒತ್ತಡದಿಂದಲೇ ಜೀವನ ಸಾಗಿಸುತ್ತಿರುತ್ತಾನೆ. ಅವರು ಹೊಂದಿರುವ ಸ್ಥಾನಮಾನ ಮತ್ತು ಜವಾಬ್ದಾರಿಗೆ ಅನುಸಾರವಾಗಿ ಒತ್ತಡದ ಪ್ರಮಾಣವನ್ನು ನಿರ್ಧರಿಸಬಹುದು.ಇದು ತಂತ್ರಜ್ಞಾನದ ಯುಗ, ಸರ್ಕಾರಿ ವ್ಯವಸ್ಥೆಯಲ್ಲಿಯೂ ಸಹ ಹಂತಹಂತವಾಗಿ ಇ-ಆಡಳಿತವನ್ನು ಜಾರಿಗೊಳಿಸಲಾಗುತ್ತಿದೆ. ತಂತ್ರಜ್ಞಾನದ ಜೊತೆಗೆ ಹೊಂದಿಕೊಂಡು, ಹೊಸ ವಿಷಯಗಳನ್ನು ಸಾಧ್ಯವಾದಷ ಬೇಗನೆ ಮನನ ಮಾಡಿಕೊಂಡು, ಕೆಲಸ ನಿರ್ವಹಿಸುವುದು ಸವಾಲಿನ ಕೆಲಸ. ಈ ಅಂಶವೂ ನೌಕರರ ಮೇಲಿನ ಒತ್ತಡವನ್ನು ಹೆಚ್ಚಿಸುತ್ತಿದೆ ಎಂದರು.
ಕೆಲಸದ ಸ್ಥಳಗಳಲ್ಲಿ ನಿಜಕ್ಕೂ ಹೆಚ್ಚಿನ ಒತ್ತಡವಿದೆಯೇ? ಅಥವಾ ಆ ಒತ್ತಡವನ್ನು ನಾವಾಗಿಯೇ ಸೃಷ್ಟಿಸಿಕೊಂಡು, ಕೆಲಸಗಳ ನಿರ್ವಹಣೆಯನ್ನು ಜಟಿಲ ಮಾಡಿಕೊಂಡು, ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದೇವೆಯೇ? ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದು ಹೇಳಿದರು.
ಇದಕ್ಕೆ ಕಂಡುಕೊಂಡ ಉತ್ತರ ಅಂದರೆ, ಹೆಚ್ಚಿನ ಸಂದರ್ಭಗಳಲ್ಲಿ ಕೆಲಸದ ಸ್ಥಳಗಳಲ್ಲಿ ಒತ್ತಡವನ್ನು ನಾವಾಗಿಯೇ ಸೃಷ್ಟಿ ಮಾಡಿಕೊಳ್ಳುತ್ತಿರುವುದು. ಅದಕ್ಕೆ. ಹಲವು ಕಾರಣಗಳಿರಬಹುದು. ನಾವು ಕೆಲಸ ಮಾಡುವ ಇಲಾಖೆ, ಇಲಾಖೆಯ ಕಚೇರಿಗಳಲ್ಲಿನ ಕಾರ್ಯವೈಖರಿ, ಸಹೋದ್ಯೋಗಿಗಳು, ಮೇಲಾಧಿಕಾರಿಗಳ ಕಾರ್ಯವೈಖರಿ, (ಅದು ನಮಗೆ ಪೂರಕವಾಗಿರಬಹುದು ಅಥವಾ ವ್ಯತಿರಿಕ್ತವಾಗಿರಬಹುದು) ಸಾರ್ವಜನಿಕರ ಪಾಲ್ಗೊಳ್ಳುವಿಕೆ, ಸಂಘ-ಸಂಸ್ಥೆಗಳ ಒತ್ತಡ ಸೇರಿದಂತೆ ಇತ್ಯಾದಿ ಕಾರಣಗಳು ನಮ್ಮ ದೈನಂದಿನ ಕಚೇರಿ ಕೆಲಸದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಈ ಎಲ್ಲಾ ಒತ್ತಡಗಳ ಮಧ್ಯೆ ನಾವು ನಮ್ಮ ಪ್ರತಿದಿನದ ಕರ್ತವ್ಯವನ್ನು ಯಾವುದೇ ಲೋಪವಿಲ್ಲದೆ, ನಿಗದಿತ ಅವಧಿಯೊಳಗೆ ನಿರ್ವಹಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.
ನಮ್ಮ ಸುತ್ತಮುತ್ತ ಪ್ರತಿದಿನ ಇರುವ ಈ ರೀತಿಯ ಒತ್ತಡಗಳನ್ನು ನಿವಾರಿಸಿಕೊಂಡು, ಕೆಲಸ ನಿರ್ವಹಿಸಲು ಖಂಡಿತ ಸಾಧ್ಯವಿದೆ. ಪೂರ್ವ ನಿರ್ಧರಿತ ಆಲೋಚನೆಗಳನ್ನು ಬದಿಗಿರಿಸಿ (ಆoಟಿ’ಣ be Pಡಿemiಟಿಜeಜ), ಕೆಲಸದ ಮೇಲೆ ಮತ್ತು ಸಹೋದ್ಯೋಗಿಗಳ ಮೇಲಿನ ನಮ್ಮ ಸಂಕುಚಿತ ಭಾವನೆಯನ್ನು ತೊಡೆದು ಕೆಲಸದ ವಾತಾವರಣವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ, ದೈನಂದಿನ ಕಚೇರಿ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ, ಒತ್ತಡ ಮುಕ್ತವಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸಬಹುದಾಗಿದೆ ಎಂದರು.
ನಮ್ಮ ನಮ್ಮ ಮನೆಗಳಲ್ಲಿಯೇ, ಮನೆಯ ಸದಸ್ಯರ ಮಧ್ಯೆ ಪ್ರತಿದಿನ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಮನಸ್ತಾಪಗಳು, ವಾದವಿವಾದಗಳು ಆಗುತ್ತಿರುತ್ತವೆ. ಆದರೂ ಸಹ ನಾವು ಅವುಗಳೊಂದಿಗೆ ಹೊಂದಿಕೊಂಡು, ನಮ್ಮ ಪ್ರತಿದಿನದ ಜೀವನವನ್ನು ಕಳೆಯುತ್ತಿದ್ದೇವೆ. ಅದೇ ರೀತಿಯ, ಹೊಂದಾಣಿಕೆ ಗುಣವನ್ನು ಕಚೇರಿಯಲ್ಲಿ ನಾವು ಬೆಳೆಸಿಕೊಳ್ಳುವುದು ಉತ್ತಮ ಬೆಳವಣಿಗೆ, ಮನೆ ಕೆಚೇರಿ ಆಗಬಾರದು. ಆದರೆ ಕಚೇರಿ ಮನೆಯಾಗಬಹುದಲ್ಲವೇ?. ಪ್ರಯತ್ನ ಹೆಚ್ಚಿರಲಿ, ನಿರೀಕ್ಷೆ ಕಡಿಮೆ ಇರಲಿ ಎಂದು ತಿಳಿಸಿದರು.
ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿ ಹಾಗೂ ಮಾನಸಿಕ ಆರೋಗ್ಯಾಧಿಕಾರಿ ಡಾ. ಎನ್.ಸಿ ನಾರಾಯಣಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕೆಲಸದ ಒತ್ತಡ ಮನುಷನನ್ನು ಮಾದಕ ವ್ಯಸನಗಳ ದಾಸನನ್ನಾಗಿಸುತ್ತದೆ. ಒತ್ತಡದಿಂದ ಹೊರಬರಲು ಮಾದಕ ವಸ್ತು ಸೇವನೆ ಅಲ್ಲದೇ ಬೇರೆ ಅನೇಕ ಯೋಗ್ಯ ಮಾರ್ಗಗಳಿವೆ. ಒಮ್ಮೆ ಮಾದಕ ವ್ಯಸನಿಯಾದರೆ ಅದನ್ನು ತ್ಯಜಿಸಲು ಬಹಳ ಕಷ್ಟ ಪಡಬೇಕಾಗುತ್ತದೆ. ಮಾದಕ ದ್ರವ್ಯ ಸೇವನೆಯು ಮನುಷನನ್ನು ಆರ್ಥಿಕವಾಗಿ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಘಾಸಿ ಮಾಡುತ್ತದೆ. ಕಳೆದ ಸಾಲುಗಳಲ್ಲಿ ೩೭೬೪ ಮಾದಕ ವ್ಯಸನಿಗಳನ್ನು ಕುಡಿತದಿಂದ ಬಿಡಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀಮತಿ ಮಂಗಳ, ಉಪ ಪೊಲೀಸ್ ಅಧೀಕ್ಷಕರಾದ ರವಿಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಜಗದೀಶ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸನ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮುರಳಿ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ವಿದ್ಯಾ, ಶ್ರೀ ವಿಜಯಸಾಯಿ ಬಿ. ಎಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.