ಅನುಭವದಿಂದ ನೀಡುವ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ:ಡಾ. ಕುಬಸದ
ಸಂಜೆವಾಣಿ ವಾರ್ತೆ,
ವಿಜಯಪುರ, ಜೂ. 29: ದಯೆ, ಶ್ರದ್ಧೆ ಮತ್ತು ವೃತ್ತಿಪರ ಅನುಭವದಿಂದ ನೀಡುವ ಚಿಕಿತ್ಸೆ ರೋಗಿಗಳು ಬೇಗ ಗುಣಮುಖರಾಗಲು ಕಾರಣವಾಗುತ್ತವೆ ಎಂದು ಮುಧೋಳದ ಖ್ಯಾತ ಶಸ್ತ್ರಚಿಕಿತ್ಸೆ ತಜ್ಞ ಡಾ. ಶಿವಾನಂದ ಕುಬಸದ ಹೇಳಿದ್ದಾರೆ.
ನಗರದ ಬಿ. ಎಲ್. ಡಿ. ಈ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸೆ ವಿಭಾಗದ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಗ್ರಾಮೀಣ ಶಸ್ತ್ರಚಿಕಿತ್ಸಕರು – ಒಂದು ಅವಲೋಕನ ಕುರಿತು ಉಪನ್ಯಾಸ ನೀಡಿದ ಅವರು, ಗ್ರಾಮೀಣ ಭಾಗದಲ್ಲಿ ತಾವು ಅನುಭವಿಸಿದ ವೈದ್ಯಕೀಯ ಕ್ಷೇತ್ರದಲ್ಲಿನ ಸಂಕಷ್ಟಗಳು ಮತ್ತು ಸವಾಲುಗಳು ಹಾಗೂ ರೋಗಿಗಳು ಗುಣಮುಖರಾದ ನಂತರ ಪಡೆದ ಸಂತ್ರಪ್ತಿಯ ಬಗ್ಗೆ ವಿವರಿಸಿದರು. ತಮ್ಮ 40 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಬಸವಣ್ಣನವರ ದಯವೇ ಧರ್ಮದ ಮೂಲ ಎಂಬ ತತ್ವದಡಿ 40 ಸಾವಿರಕ್ಕಿಂತಲೂ ಹೆಚ್ಚು ಶಸ್ತ್ರ ಚಿಕಿತ್ಸೆಗಳನ್ನು ನೆರವೇರಿಸಿರುವುದಾಗಿ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿ. ಎಲ್. ಡಿ. ಈ ಡೀಮ್ಡ್ ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ, ತಾವು ಡಾ. ಕುಬಸದ ಅವರ ಸಹಪಾಠಿಯಾಗಿದ್ದು, ವಿದ್ಯಾರ್ಥಿ ದೆಸೆಯಿಂದಲೇ ಅವರು ಪ್ರತಿಭಾವಂತರಾಗಿದ್ದಾರೆ. ತಾವು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದರೆ, ಡಾ. ಕುಬಸದ ಅವರು ಗ್ರಾಮೀಣ ಪ್ರದೇಶದಲ್ಲಿ ಮಹತ್ತರ ವೈದ್ಯಕೀಯ ಸೇವೆಯನ್ನು ಸಲ್ಲಿಸಿ ಜನರ ಪಾಲಿನ ಜನಾರ್ಧನರಾಗಿದ್ದಾರೆ. ಅವರನ್ನು ಬಿ. ಎಲ್. ಡಿ. ಈ ಡೀಮ್ಡ್ ವಿವಿಯ “ಪೆÇ್ರಫೆಸರ್ ಆಫ್ ಪ್ರ್ಯಾಕ್ಟೀಸ” ಎಂದು ನೇಮಿಸಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾಲೇಜಿನ ಉಪಪ್ರಾಚಾರ್ಯ ಡಾ. ಎಂ. ಬಿ ಪಾಟೀಲ ಮಾತನಾಡಿ, ಡಾ. ಶಿವಾನಂದ ಕುಬಸದ ಅವರು ಬಹುಮುಖ ಪ್ರತಿಭೆಯ ವೈದ್ಯರಾಗಿದ್ದು, ಗ್ರಾಮೀಣ ಪ್ರದೇಶದಲ್ಲಿನ ಅವರ ಸಾಧನೆಯಿಂದ ಯುವ ವೈದ್ಯರು ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಸಾಕಷ್ಟು ಕಲಿಯಬೇಕಿದೆ ಎಂದು ಹೇಳಿದರು.
ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ.ಕೋಟೆಣ್ಣವರ ಅವರು ಸ್ವಾಗತಿಸಿ, ಪರಿಚಯಿಸಿದರು. ಡಾ. ವಿಕ್ರಮ ಸಿಂದಗಿಕರ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಡೀನ್ ಫ್ಯಾಕಲ್ಟಿ ಆಫ್ ಮೆಡಿಸಿನ್ ಡಾ. ತೇಜಸ್ವಿನಿ ವಲ್ಲಭ, ಆರ್. ಎಂ. ಒ ಡಾ. ಅಶೋಕ ತರಡಿ, ಪ್ರಾಧ್ಯಾಪಕ ಡಾ. ಗಿರೀಶ ಕುಲ್ಲೊಳ್ಳಿ, ಡಾ. ರಮಾಕಾಂತ ಬಳೂರಕರ, ಸಹ ಪ್ರಾಧ್ಯಾಪಕ ಡಾ. ದಯಾನಂದ ಬಿರಾದಾರ, ಡಾ. ಎಸ್. ಎಸ್. ಪಾಟೀಲ, ಡಾ. ಸಂಜೀವ ರಾಠೋಡ, ಡಾ. ಶ್ರುತಿ ಶೀಳೀನ, ಶಸ್ತ್ರಚಿಕಿತ್ಸೆ ವಿಭಾಗದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಕಿರಿಯ ವೈದ್ಯರು ಉಪಸ್ಥಿತರಿದ್ದರು.