ಭಾರತೀಯ ಸಂಸ್ಕೃತಿಯಲ್ಲಿ ಅಕ್ಷರಾಭ್ಯಾಸ ಶ್ರೇಷ್ಠವಾದುದು
ಕೊರಟಗೆರೆ, ಜೂ. ೨೯- ಭಾರತೀಯ ಹಿಂದೂ ಸಂಸ್ಕೃತಿಗಳಲ್ಲಿ ೧೬ ಸಂಸ್ಕೃತಿಗಳಿದ್ದು, ಅದರಲ್ಲಿ ಒಂದಾದ ಅಕ್ಷರಾಭ್ಯಾಸ ಅತ್ಯಂತ ಶ್ರೇಷ್ಠವಾದುದು. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಕಲಿಕೆಗೆ ಮುನ್ನುಡಿ ಬರೆಯಲಾಗುತ್ತಿದೆ ಎಂದು ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಚಾಣುಕ್ಯ ಪಬ್ಲಿಕ್ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ಅಂಕುರ-೨೦೨೪ ರಲ್ಲಿ ದಾಖಲಾದ ಪುಟ್ಟ ಮಕ್ಕಳಿಗೆ ಪ್ರಥಮ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಮಗುವು ತಾಯಿ ಗರ್ಭಾವಸ್ಥೆಯಿಂದ ಹಿಡಿದು ದೊಡ್ಡವರಾಗುವವರೆಗೂ ೧೬ ಸಾಂಸ್ಕೃತಿಕ ಪದ್ಧತಿಗಳಿದ್ದು, ಅದರಲ್ಲಿ ಅಕ್ಷರಾಭ್ಯಾಸ ಒಂದಾಗಿದ್ದು ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವ ಬದಲು ಅಕ್ಷರ ಕಲಿಸಿದರೆ ಪೋಷಕರು ನೀಡುವ ಆಸ್ತಿಗಿಂದ ೧೦ ಪಟ್ಟು ಆಸ್ತಿ ಸಂಪಾದನೆ ಮಾಡುವ ಶಕ್ತಿ ಬರುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಶಾಲೆ ದೇವಾಲಯವಿದ್ದಂತೆ ಅಲ್ಲಿ ಆ ಮಗುವಿನ ಕಾರ್ಯ ಪ್ರವೃತ್ತಿ, ಕಲಿಕಾ ಗುಣ, ಮಾನಸಿಕ ಸ್ಥೈರ್ಯ, ವಿಶ್ವಾಸ ಬೆಳೆಸುವ ಒಂದು ವಿಶೇಷ ಸ್ಥಳವಾಗಿದ್ದು ಪೊಷಕರು ಮಕ್ಕಳಿಗೆ ಶಾಲೆ ಶಿಕ್ಷಕರು ಮತ್ತು ಅಲ್ಲಿನ ವಾತಾವರಣದ ಬಗ್ಗೆ ಅರಿವು ಮೂಡಿಸುವುದರ ಮೂಲಕ ಮಕ್ಕಳಿಗೆ ಧನಾತ್ಮಕವಾದ ಗುಣಗಳನ್ನು ಬೆಳೆಸಿ ಅವರ ಬದುಕಿಗೆ ಹೊಸ ಚೈತನ್ಯದ ವೇದಿಕೆಯನ್ನು ಕಲ್ಪಸಿ ಮಗುವಿನ ಕಲಿಕೆಯಲ್ಲಿ ಅವರ ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಮತ್ತು ಮಕ್ಕಳ ಆಹಾರ ಪದ್ದತಿ ಸೇರಿದಂತೆ ಸರ್ವಾಂಗೀಣ ಅಭಿವೃದ್ದಿಗೆ ಪ್ರೇರಕ ಮತ್ತು ಪೂರಕ ವಾತಾವರಣ ಮೂಡಿಸವ ಮೂಲಕ ಮಕ್ಕಳನ್ನು ಉತ್ತಮ ಸಮಾಜದ ಶ್ರೇಷ್ಠ ನಾಗರಿಕರನ್ನಾಗಿ ಬೆಳೆದು ಬದುಕಲು ಅವಕಾಶ ಮಾಡಿ ಕೊಡಬೇಕು ಎಂದು ಪೋಷಕರಿಗೆ ಕಿವಿ ಮಾತು ಹೇಳಿದರು.
ಶಾಲಾ ಆಡಳಿತ ಮಂಡಲಿಯ ನರಸಿಂಹಲು ಬಾಬು ಮಾತನಾಡಿ, ಪುರಾತನ ಕಾಲದಿಂದಲೂ ನಡೆದುಕೊಂಡು ಬರುತ್ತಿದ್ದ ಭಾರತೀಯ ಸಂಸ್ಕೃತಿ ಇತ್ತೀಚಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನ ಸಮಾಜದಲ್ಲಿ ಭಾರತೀಯ ಕಣ್ಮರೆಯಾಗುತ್ತಿದ್ದು ನಮ್ಮ ಭಾರತೀಯ ಸಂಸ್ಕೃತಿಯನ್ನು ಜನರಲ್ಲಿ ರೂಡಿಸುವ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ಶಾಲೆ ಪ್ರಾರಂಭವಾದ ದಿನದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಒಂದಾದ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ನೂತನವಾಗಿ ಶಾಲೆಯಲ್ಲಿ ದಾಖಲಾದ ಮಕ್ಕಳಿಗೆ ಪ್ರಥಮ ಅಕ್ಷರಾಭ್ಯಾಸ ಮಾಡುವ ಕಾರ್ಯಕ್ರಮ ಆಚರಣೆ ಮಾಡುತ್ತಿದ್ದು, ಈ ಕಾರ್ಯಕ್ರಮದಿಂದ ಪೋಷಕರಲ್ಲಿ ತಮ್ಮ ಮಗುವಿನ ಮೇಲಿನ ಜವಾಬ್ದಾರಿಯ ಅರಿವು ನೀಡಿ ಜಮಾಜದಲ್ಲಿ ತಮ್ಮ ಮಗುವನ್ನು ಉತ್ತಮ ಪ್ರಜೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಅರಿವು ಮೂಡಿಸಲಾಗುವುದು ಎಂದರು.
ನಮ್ಮ ಶಾಲೆ ಗ್ರಾಮಾಂತರ ಬಡ ಕುಟುಂಬದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತಾಗಲಿ ಎಂಬ ಮನೂಭಾವದಿಂದ ಪ್ರಾರಂಭವಾದ ಶಾಲೆ. ಅತಿ ಕಡಿಮೆ ಶುಲ್ಕದಲ್ಲಿ ಜನಸಾಮಾನ್ಯರಿಗೆ ಎಟುಕುವ ನಿಟ್ಟಿನಲ್ಲಿ ಶುಲ್ಕ ಪಡೆದು ಉತ್ತಮ ಶಿಕ್ಷಣ ನೀಡುತ್ತಿದ್ದು ನಮ್ಮ ಆಶಯದಂತೆ ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶದಲ್ಲಿ ತಾಲ್ಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಇದೇ ರೀತಿಯ ಫಲಿತಾಂಶ ಪಡೆಯವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾರದಾ ಪೂಜೆಯೊಂದಿಗೆ ಮಂತ್ರ ಘೊಷದಿಂದ ಮಕ್ಕಳಿಂದ ಅ,ಆ ಅಕ್ಷರ ಮತ್ತು ಅಪ್ಪ ಅಮ್ಮ ಎಂದು ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿ ಬರೆಸುವ ಮೂಲಕ ಕಲಿಕೆಗೆ ಮುನ್ನಡಿ ಬರೆದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸಿ.ಎಸ್.ಹನುಮಂತರಾಜು, ಆರ್.ಪಿ.ರವಿಕುಮಾರ್ ಸೇರಿದಂತೆ ಶಾಲೆಯ ಎಲ್ಲ ಶಿಕ್ಷಕರು ಭಾಗವಹಿಸಿದ್ದರು.