ಶರಣರ ವಚನಗಳಲ್ಲಿ ಯೋಗ-ಶಿವಯೋಗವೂ ಇದೆ
ತುಮಕೂರು, ಜೂ. ೨೯- ಬಸವಾದಿ ಶರಣರ ನೂರಾರು ವಚನಗಳಲ್ಲಿ ಯೋಗ ಹಾಗೂ ಶಿವಯೋಗ ಕುರಿತಂತೆ ತತ್ವಗಳು ಅಡಗಿವೆ ಎಂದು ಯೋಗ ಶಿಕ್ಷಕ ಹಾಗೂ ವಕೀಲ ಎಸ್.ವಿ. ರವೀಂದ್ರನಾಥ ಠಾಗೂರ್ ಹೇಳಿದರು.
ಜಿಲ್ಲಾ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್, ಗ್ಲೋಬಲ್ ಪೀಸ್ ಹಾಗೂ ಪರಂಜ್ಯೋತಿ ಸಂಯೋಗ ಸೇವಾ ಮಂಟಪದ ಸಂಯುಕ್ತಾಶ್ರಯದಲ್ಲಿ ಭವಾನಮ್ಮ ಗುರುಮಲ್ಲಪ್ಪ ರವರ ಶ್ರೀ ಸದ್ಗುರು ವಂದನಾ ಗುರುಗಳ ಸಂಸ್ಮರಣಾ ದತ್ತಿಯಲ್ಲಿ ಅಂತಾರಾಷ್ಟ್ರೀಯ ಯೋಗದಿನ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಚನಗಳಲ್ಲಿ ಯೋಗ-ಶಿವಯೋಗ ಕುರಿತು ಅವರು ಮಾತನಾಡಿದರು.
ಭಾರತೀಯ ಋಷಿಮುನಿಗಳ ಸಾವಿರಾರು ವರ್ಷಗಳ ತಪಸ್ಸಿನ ಫಲದಿಂದ ಯೋಗ ಪ್ರಸ್ತುತ ವಿಶ್ವವ್ಯಾಪಿಯಾಗಿದೆ. ಯೋಗ ಶರೀರ ಮತ್ತು ಮನಸ್ಸನ್ನು ಒಂದುಗೂಡಿಸುತ್ತದೆ. ಶರೀರಕ್ಕೆ ಆರೋಗ್ಯವನ್ನು ನೀಡುತ್ತದೆ. ಹಾಗೆಯೇ ಶರಣರು ವಚನಗಳ ಮೂಲಕ ಮನುಷ್ಯನ ಅಂತರಂಗದಲ್ಲಿ ಶಿವನನ್ನು ನೆನೆಯುವುದೇ ಯೋಗ. ಸ್ವಾರ್ಥರಹಿತ ಜೀವನವೇ ಯೋಗ. ಸರ್ವರಿಗೂ ಲೇಸ ಬಯಸುವುದೇ ಯೋಗ. ಬೇರೆಯವರೊಂದಿಗೆ ಬೆರೆಯುವುದೇ ಯೋಗ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಜಿ. ಸಿದ್ಧರಾಮಯ್ಯ ಮಾತನಾಡಿ, ಇಂದಿನ ಆಧುನಿಕ ಮಾನವನಿಗೆ ಕಾರ್ಯ ಒತ್ತಡಗಳಿಂದ ಖಿನ್ನತೆಗೆ ಒಳಗಾಗಿದ್ದಾನೆ. ಯುವಶಕ್ತಿಯಲ್ಲಿ ಉತ್ಸಾಹ ಕಾಣುತ್ತಿಲ್ಲ. ಇದಕ್ಕೆಲ್ಲಾ ಪರಿಹಾರ ವಚನಗಳ ಅಧ್ಯಯನ ಮಾಡುತ್ತಾ ಪ್ರತಿನಿತ್ಯ ಯೋಗಾಭ್ಯಾಸ ಮಾಡುವಂತೆ ಕರೆ ನೀಡಿದರು.
೮೩ ವರ್ಷದ ಮಾತೆ ಯೋಗಿನಿ ಜೆ.ಶಕುಂತಲಾದೇವಿ ಸೂರ್ಯ ನಮಸ್ಕಾರದ ಎಲ್ಲ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ಹತ್ತಾರು ಆಸನ ಪ್ರದರ್ಶಿಸಿದರು. ಯೋಗ ಶಿಕ್ಷಕಿ, ಲಲಿತಾ ಯೋಗಾಸನದ ವಿವರ ನೀಡಿ ಪ್ರಯೋಜನ ತಿಳಿಸಿದರು.
ಇದೇ ಸಂದರ್ಭದಲ್ಲಿ ಶತಾಯುಷಿ ಲಿಂಗಮ್ಮ ಮತ್ತು ಶಿಕ್ಷಣ ಭೀಷ್ಣ ಎ. ಶಿವಣ್ಣ ರವರನ್ನು ಸನ್ಮಾನಿಸಲಾಯಿತು.
ಹಂ.ಸಿ. ಕುಮಾರಸ್ವಾಮಿ ಸ್ವಾಗತಿಸಿದರು. ಬಿ. ರಾಜಶೇಖರಯ್ಯ ವಂದಿಸಿದರು. ಮಿಮಿಕ್ರಿ ಈಶ್ವರಯ್ಯ ಕಾರ್ಯಕ್ರಮ ನಿರೂಪಿಸಿದರು.