ಶಿಕ್ಷಕರ ಬದುಕು ಇತರರಿಗೆ ಮಾದರಿ: ಸಿಬಿಎಸ್
ಚಿಕ್ಕನಾಯಕನಹಳ್ಳಿ, ಜೂ. ೨೯- ಶಿಸ್ತಿನ ಜೀವನ ಶೈಲಿ ಹಾಗೂ ಸಮಯಪಾಲನೆ, ಶಿಕ್ಷಕರ ಬದುಕಿನ ರೀತಿ ಇತರರಿಗೂ ಮಾದರಿಯಾಗಬೇಕು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಹೇಳಿದರು.
ಪಟ್ಟಣದಲ್ಲಿ ತಾಲ್ಲೂಕಿನ ವಿವಿಧ ಶಿಕ್ಷಕರ ಸಂಘಟನೆಗಳು ಹಾಗೂ ಬಿಇಓ ಕಚೇರಿ ವತಿಯಿಂದ ಸೇವೆಯಿಂದ ನಿವೃತ್ತಿಯಾದ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ರಂಗಧಾಮಯ್ಯ ರವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ತಂದೆಯವರಾದ ಮಾಜಿ ಸಚಿವ ಎನ್.ಬಸವಯ್ಯನವರು ತಮ್ಮ ಬದುಕಿನ ಆರಂಭದ ಘಟ್ಟದಲ್ಲಿ ಶೆಟ್ಟಿಕೆರೆಯ ಹೈಸ್ಕೂಲ್‌ವೊಂದರ ಮುಖ್ಯೋಪಾಧ್ಯಾಯರಾಗಿದ್ದರು ಎಂದು ಸ್ಮರಿಸಿಕೊಂಡ ಅವರು, ಹಾಗಾಗಿ ನನಗೆ ಶಿಕ್ಷಕರ ಮೇಲೆ ಅಕ್ಕರೆ. ಶಿಕ್ಷಣ ಕ್ಷೇತ್ರದ ಬಗ್ಗೆ ಆಸಕ್ತಿ, ನಾನು ಈ ಬಾರಿ ಗೆದ್ದ ಆರಂಭದಲ್ಲಿ ತಾಲ್ಲೂಕಿನ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರ ಸಭೆ ಕರೆದು ಶಾಲೆಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳ ಬಗ್ಗೆ ಪಟ್ಟಿ ತಯಾರಿಸಿ ಅದನ್ನು ಕಾರ್ಯಗತಗೊಳಿಸಲು ಬಿ.ಇ.ಓ ರವರೊಂದಿಗೆ ಚರ್ಚಿಸಿ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ ಎಂದರು.
ತಾಲ್ಲೂಕಿನಲ್ಲಿ ಈ ಶೈಕ್ಷಣಿಕ ವರ್ಷದಿಂದ ಐದು ಸರ್ಕಾರಿ ಹೆಚ್.ಪಿ.ಎಸ್‌ಗಳಿಗೆ ಒಂದನೇ ತರಗತಿಯಿಂದ ಇಂಗ್ಲೀಷ್ ಮಾಧ್ಯಮ ಶಾಲೆ ಆರಂಭಿಸಲಾಗಿದೆ. ಈ ನಿಟ್ಟಿನಲ್ಲಿ ಬೀಳ್ಕೊಡುತ್ತಿರುವ ನಿವೃತ್ತ ಉಪ ನಿರ್ದೇಶಕರಾದ ಡಿ.ರಂಗಧಾಮಯ್ಯ ನವರ ಪಾತ್ರವೂ ಇದೆ ಎಂದರು. ಅಭಿನಂದನೆ ಸ್ವೀಕರಿಸಿದ ನಿವೃತ್ತ ಉಪನಿರ್ದೇಶಕ ಸಿ.ರಂಗಧಾಮಯ್ಯ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿನ ನನ್ನ ಸೇವೆ ತೃಪ್ತಿ ತಂದಿದೆ. ಉಪನಿರ್ದೇಶಕನಾಗಿ ಕರ್ತವ್ಯ ನಿರ್ವಹಿಸಿದ ದಿನಗಳಲ್ಲಂತೂ ಅಂದಿನಿಂದ ಕಡತಗಳ ವಿಲೇವಾರಿ ಮಾಡದೆ ವಿಶ್ರಮಿಸುತ್ತಿರಲಿಲ್ಲ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಶಿಕ್ಷಣ ವ್ಯವಸ್ಥೆ ಎಸ್.ಎಸ್.ಎಲ್.ಸಿ ಫಲಿತಾಂಶ ಮೊದಲ್ಗೊಂಡು ಪ್ರಾಥಮಿಕ ಶಿಕ್ಷಣದ ಎಫ್.ಎಲ್.ಎನ್ ವರೆಗೆ ಜಿಲ್ಲೆಗೆ ಮೊದಲ ಸ್ಥಾನದಲ್ಲಿದೆ ಎಂದರು.
ಬಿಇಓ ಕಾಂತರಾಜು ಸಿ.ಎಸ್. ಮಾತನಾಡಿ, ಮೇಲಾಧಿಕಾರಿಗಳ ಬೆಂಬಲ ಹಾಗೂ ಪ್ರೋತ್ಸಾಹ ಉತ್ತಮವಾಗಿದ್ದರೆ ನಾವು ಧೈರ್ಯದಿಂದ ಮುನ್ನುಗಿ ಕೆಲಸ ಮಾಡಬಹುದು. ನನಗೆ ೨೦೦೪ ರಿಂದಲೂ ರಂಗಧಾಮಯ್ಯನವರ ಮಾರ್ಗದರ್ಶನ ದೊರೆತಿದ್ದರಿಂದ ಉತ್ತಮವಾದ ಕೆಲಸಗಳನ್ನು ಮಾಡಲು ಸಾಧ್ಯವಾಯಿತು ಎಂದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂರ್ತಿ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ರಂಗಧಾಮಯ್ಯನವರು ತಮ್ಮ ಅವಧಿಯಲ್ಲಿ ಉತ್ತಮವಾಗಿ ಸ್ಪಂದಿಸಿದರು. ಜತೆಗೆ ಜಿಲ್ಲಾ ಕೇಂದ್ರದಲ್ಲಿ ಗುರುಭವನದ ಶಂಕುಸ್ಥಾಪನೆ ಹಂತಕ್ಕೆ ತರುವಲ್ಲಿ ಅವರ ಪಾತ್ರ ಅವಿಸ್ಮರಣೀಯ ಎಂದರು.
ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಗಂಗಾಧರಯ್ಯ ಕೆ.ಎಂ., ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಅಧ್ಯಕ್ಷ ಗವಿರಂಗಯ್ಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್, ಬಿಇಓ ಕಚೇರಿಯ ವ್ಯವಸ್ಥಾಪಕಕ ಗಿರೀಶ್ ಸೇರಿದಂತೆ ವಿವಿಧ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ಉಪಾಧ್ಯಾಯರ ಸಹಕಾರ ಸಂಘದ ಅಧ್ಯಕ್ಷ ಕೆ.ಶಿವಕುಮಾರ್ ಸ್ವಾಗತಿಸಿದರು. ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜು ಪಲ್ಲಕ್ಕಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.