ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ಕೆಲವರಿಗೆ ಮಾರ್ಗದರ್ಶನ ಮಾಡಿದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ
ಬಸವಕಲ್ಯಾಣ: ಜೂ.29:ಜಮೀನಿನ ಸಮಸ್ಯೆ, ಕೆರೆಗಳು ಒಡೆದು ಜಮೂನು ಹಾಳು, ರಸ್ತೆ ಕಾಮಗಾರಿ, ಉದ್ಯೋಗ ಖಾತ್ರಿ ಯೋಜನೆ, ಮತದಾರರ ಗುರುತಿನ ಚೀಟಿ, ಕಾರ್ಖಾನೆಯಲ್ಲಿ ಮಾಡಿದ ಕೆಲಸದ ಕೂಲಿ ಹಣ ಬಿಡುಗಡೆ, ಕಾಡು ಹಂದಿಯಿಂದ ರೈತರಿಗಾಗುತ್ತಿರುವ ಅನ್ಯಾಯ ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆ ಹರಿಸಿಕೊಡುವಂತೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರ ಮುಂದೆ ಸಾರ್ವಜನಿಕರು ತಮ್ಮ ಸಮಸ್ಯೆಯ ಅಳಲನ್ನು ತೋಡಿಕೊಂಡರು.
ಇಲ್ಲಿಯ ತಹಸೀಲ್ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ಜರುಗಿದ ಜನ ಸ್ಪಂದನಾ ಸಭೆಯಲ್ಲಿ ನಗರ ಪ್ರದೇಶ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಮಹಿಳೆಯರು, ಮಕ್ಕಳು, ರೈತರು ತಮ್ಮ ಸಮಸ್ಯೆಗಳು ಪರಿಹರಿಸುವಂತೆ ಬೇಡಿಕೊಂಡರು. ಎಲ್ಲರ ಸಮಸ್ಯೆಗಳನ್ನು ಸಮಚಿತ್ತದಿಂದ ಆಲಿಸಿದ ಡಿಸಿ ಅವರು ಸಮಸ್ಯೆ ಆಲಿಸಿ ಅವರ ವ್ಯಾಪ್ತಿಯಲ್ಲಿ ಆಗುತ್ತಿದ್ದರೆ ಸಮಸ್ಯೆ ಬಗೆ ಹರಿಸುವಂತೆ ಸಂಬಂಧಿತರಿಗೆ ಮಾರ್ಗದರ್ಶನ ಮಾಡುತ್ತಿದ್ದರೆ ಕೆಲ ಸಮಸ್ಯೆಗಳನ್ನು ನಮ್ಮ ವ್ಯಾಪ್ತಿಯಲ್ಲಿ ಬರಲ್ಲ ಇಂತಹ ಸಮಸ್ಯೆಗಳನ್ನು ನ್ಯಾಯಾಲಯದಲ್ಲಿ ಬಗೆ ಹರಿಸಿಕೊಳ್ಳುವಂತೆ ಬಂದ ಜನರಿಗೆ ಸಲಹೆ ನೀಡಿದರು.
ಪಹಣಿ, ಫೋಡಿ ಸೇರಿದಂತೆ ಸಣ್ಣ ಸಮಸ್ಯೆಗಳನ್ನು ಕೂಡಲೇ ಬಗೆ ಹರಿಸಿಕೊಂಡುವಂತೆ ಸ್ಥಳದಲ್ಲಿದ್ದ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರೆ ಕೆಲ ಗಂಭೀರ ಸಮಸ್ಯೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಹಾಯಕ ಆಯುಕ್ತ ಪ್ರಕಾಶ ಕುದರಿ ಹಾಗೂ ತಹಸೀಲ್ದಾರ ಶಾಂತಗೌಡ ಬಿರಾದಾರ ಅವರಿಗೆ ಸಲಹೆ ನೀಡಿದರು.
ಅಲ್ಲದೆ ಕೃಷಿ ಇಲಾಖೆ, ಅರಣ್ಯ ಇಲಾಖೆ, ಕೆಇಬಿ, ತಾಪಂ ಇಲಾಖೆ, ನಗರ ಸಭೆಯ ವ್ಯಾಪ್ತಿಗೆ ಒಳಪಟ್ಟ ಸಮಸ್ಯೆಗಳನ್ನು ಪರಿಶೀಲಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಮಾರ್ಗದರ್ಶನ ಮಾಡಿದರು. ಅಲ್ಲದೆ ಕೆಲ ಮಹಿಳೆಯರು ಸಮಸ್ಯೆಯ ಕುರಿತು ಜಿಲ್ಲಾಧಿಕಾರಿಗಳ ಮುಂದೆ ಕಣ್ಣಿರು ಹಾಕಿದರು. ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಡಿಸಿ ಅವರನ್ನು ಭೇಟಿ ಮಾಡಿ ರೈತರಿಗಾಗುತ್ತಿರುವ ತಮ್ಮ ಸಮಸ್ಯೆಗಳನ್ನು ಬಗೆ ಹರಿಸುವಂತೆ ಮನವಿ ಮಾಡಿದರು.
ಈ ವೇಳೆ ರೈತ ಮುಖಂಡ ಚಂದ್ರಶೇಖರ ಜಮಖಂಡಿ ಮಾತನಾಡಿ, ಬಿಎಸ್‍ಎಸ್‍ಕೆ ಸಕ್ಕರೆ ಕಾರ್ಖಾನೆಯಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡಿದ ನೌಕರರ ವೇತನ ನೀಡಿಲ್ಲ ಇದರಿಂದ ಅವರ ಕುಟುಂಬ ಸಂಕಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಅವರ ಜೊತೆ ಮಾತನಾಢಿ ಸಮಸ್ಯೆ ಬಗೆ ಹರಿಸಬೇಕು ಎಂದು ಮನವಿ ಮಾಡಿದರು.
ತಾಲೂಕಿನ ಧನಗರ ವಾಢಿ, ನಿರಗುಡಿ, ಎರಂಡಿ ಸೇರಿದಂತೆ ವಿವಿಧೆಡೆ ರೈತರ ಜಮೀನುಗಳಿಗೆ ಕಾಡು ಹಂದಿಗಳ ನುಗ್ಗಿ ಬೆಳೆ ಹಾಳು ಮಾಡುತ್ತಿವೆ. ಅವುಗಳ ಹಾವಳಿ ಹೆಚ್ಚಾಗಿದೆ. ಅವುಗಳನ್ನು ಬೇರೆ ಕಡೆ ಶಿಫ್ಟ್ ಮಾಢಬೇಕು ಇಲ್ಲವಾದಲ್ಲಿ ಅವುಗಳ ಸಂತತಿ ಕಡಿಮೆ ಮಾಡಲು ಬೇಕಾದ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಡಿಸಿ ಅವರ ಮುಂದೆ ವಿಷಯ ಪ್ರಸ್ತಾಪಿಸಿದಾಗ ಈ ವಿಷಯದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೇ ಅರಣ್ಯ ಇಲಾಖೆಯ ಸಚಿವರಿದ್ದು ಅವರ ಜೊತೆಗೆ ಚರ್ಚಿಸುವೆ ಎಂದು ಡಿಸಿ ರೈತರಿಗೆ ಭರವಸೆ ನೀಡಿದರು.
ರೈತರು ಬೆಳೆ ವಿಮೆ ಕಟ್ಟಿದರು ಕಳೆದ ಕೆಲ ವರ್ಷಗಳಿಂದ ರೈತರಿಗೆ ಸಮರ್ಪಕವಾದ ಬೆಳೆ ವಿಮೆ ಸಿಗುತ್ತಿಲ್ಲ ಕಂಪನಿಗಳಿಗೆ ಉಳಿಸುವ ಕೆಲಸ ಸರಕಾರ ಮಾಡುತ್ತಿದೆ. ಹೀಗಾದರೆ ರೈತರಿಗೆ ತೊಂದರೆಯಾಗುತ್ತದೆ. ರೈತರ ಬಗ್ಗೆ ಯೋಚಿಸಿ ಬೆಳೆವಿಮೆ ನೀಡಬೇಕು ಎಂದು ಒತ್ತಾಯಿಸಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜನರಿಗೆ ಕೆಲಸ ನೀಡಬೇಕು ಎಂಬ ನಿಯಮವಿದೆ. ಆದರೆ ಕೆಲವೆಡೆ ಜೆಸಿಬಿ ಮೂಲಕ ಕೆಲಸ ಮಾಡಿ ಬಿಲ್ ಎತ್ತುತ್ತಿದ್ದಾರೆ ಇದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಡಿಸಿ ಮುಂದೆ ರೈತ ಸಂಘದ ಪ್ರಮುಖರು ಒತ್ತಾಯಿಸಿದರು.
ತಾಲೂಕಿನ ಘಾಟ್ ಹಿಪ್ಪರಗಾ ತಾಂಡಾದ ಸರ್ವೆ ನಂ 53ರ ಜಗದೇವಿ ಎಂಬ ಮಹಿಳೆಯ ಜಮೀನಿನಲ್ಲಿ ಹಳ್ಳದ ನೀರು ಬಂದು ಜಮೀನಿನಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ ಪಕ್ಕದಲ್ಲಿನ ಹಳ್ಳ ಬಂದ್ ಮಾಡಿದ್ದರಿಂದ ಮಳೆ ನೀರು ನನ್ನ ಜಮೀನಿಗೆ ನುಗ್ಗಿ ಮಣ್ಣು ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ನನಗೆ ನ್ಯಾಯ ಕಲ್ಪಿಸಬೇಕು ಮತ್ತು ಅಕ್ರಮವಾಗಿ ಹಳ್ಳ ಬಂದ್ ಮಾಢಿದವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಡಿಸಿಗೆ ಮಹಿಳೆ ಒತ್ತಾಯಿಸಿದರು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವದು ಎಂದು ಮಹಿಳೆಗೆ ಭರವಸೆ ನೀಡಿದರು.