ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹ್ವಾಲು ಸ್ವೀಕರಿಸಿದ ಶಾಸಕರು
ಇಲಕಲ್ಲ : ಜೂ.29:ತಾಲೂಕ ಆಡಳಿತ ತಾಲೂಕ ಪಂಚಾಯತ್, ನಗರಸಭೆ ಇಲಕಲ್ಲ ನ ತಾಲೂಕ ಮಟ್ಟದ ಜನಸ್ಪಂದನಾ ಕಾರ್ಯಕ್ರಮ ಇಳಕಲ್ ತಹಶೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆಯಲ್ಲಿಜನಸ್ಪಂದನಾ ಕಾರ್ಯಕ್ರಮ ನಡೆಯಿತು.
ಜನಸ್ಪಂದನಾ ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಹಾಗೂ ಸಸಿಗೆ ನೀರು ಹಾಕುವ ಮೂಲಕ ಶಾಸಕ ವಿಜಯಾನಂದ ಕಾಶಪ್ಪನವರ್ ಜಿಲ್ಲಾಧಿಕಾರಿಗಳಾದ ಜಾನಕಿ ಕೆ ಎಂ, ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಶಿಧರ್ ಕುರೆರ ಹಾಗೂ ವೇದಿಕೆ ಮೇಲಿರುವ ಅಧಿಕಾರಿ ಬಳಗ ಉದ್ಘಾಟಿಸಿದರು.
ಮೂರು ಗಂಟೆಗಳ ಕಾಲ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಅಧಿಕೃತವಾಗಿ 63 ಅರ್ಜಿಗಳು ನೋಂದಣಿಯಾಗಿದ್ದವು, ಅದರಲ್ಲಿ ಬಹುತೇಕ ಕಂದಾಯ ಕೃಷಿ, ಗ್ರಾಮೀಣ ಭಾಗದ ರಸ್ತೆಗಳು, ವಿಧವಾ ವೇತನ, ವಿಕಲಚೇತ ನರರು, ವೃದ್ಧರು, ಹಾಗೂ ರೈತರಿಗೆ ಸಂಬಂಧಿಸಿದ ಹಲವಾರು ಅರ್ಜಿಗಳು ಬಂದಿದ್ದವು.
ಬಂದಂತಹ ಮನವಿಗಳಿಗೆ ಜಿಲ್ಲಾಧಿಕಾರಿಗಳು, ಶಾಸಕರು ಸಮಾಧಾನದಿಂದ ಸಾರ್ವಜನಿಕರಿಂದ ಹವಾಲು ಸ್ವೀಕರಿಸಿ ಉತ್ತರವನ್ನು ಸಂಬಂದಪಟ್ಟ ಅಧಿಕಾರಿಗಳಿಂದ ಒದಗಿಸಿ, ಸಮಸ್ಯೆ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದರು.
ಸ್ಥಳದಲ್ಲಿಯೇ ಪರಿಹಾರವಾಗದ ಕೆಲವೊಂದು ಸಮಸ್ಯೆಗಳಿಗೆ ಒಂದು ವಾರದಲ್ಲಿ ಪರಿಹರಿಸುವಂತೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ತಾಲೂಕ ಮಟ್ಟದ ಅಧಿಕಾರಿಗಳಿಗೆ ತಿಳಿಸಿದರು.
ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳ ಉಪಸತಿಯಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಆಯಾ ಇಲಾಖೆ ಅವರು ಅರ್ಜಿಗಳನ್ನು ಸ್ವೀಕಾರ ಮಾಡಲು ಪ್ರತ್ಯೇಕ ಕೌಂಟರ್ ಗಳನ್ನು ತೆರೆದು ಸಾರ್ವಜನಿಕರಿಂದ ಅಹ್ವಾಲು ಸ್ವೀಕರಿಸಿ ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮುಟ್ಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ವಿಜಯಾನಂದ ಕಾಶಪ್ಪನವರ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಜನಸ್ಪಂದನಾ ಸಮಾರಂಭವು ಒಂದಾಗಿದೆ, ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಜನರ ಬಳಿಗೆ ನಮ್ಮ ಸರ್ಕಾರ ಹೋಗಬೇಕು, ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆ ನೀಡಬೇಕು ಎನ್ನುವ ಉದ್ದೇಶದಿಂದ ಪ್ರಾರಂಭವಾದ ಯೋಜನೆ ಜನಸ್ಪಂದನವಾಗಿದೆ.
ನೀವು ನೀಡಿದ ಎಲ್ಲಾ ಮನವಿಗಳನ್ನ ನಮ್ಮ ತಾಲೂಕ ಮಟ್ಟದ ಅಧಿಕಾರಿಗಳು ಒಂದು ವಾರದಲ್ಲಿ ನ್ಯಾಯ ಕೊಡಿಸುವ ಕೆಲಸವನ್ನ ಮಾಡುತ್ತಾರೆ ಎಂದರು.
ಅಲ್ಲದೆ ಇದೇ ರೀತಿಯಲ್ಲಿ ನಮ್ಮ ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳೊಂದಿಗೆ ಗ್ರಾಮ ಪಂಚಾಯಿತಿವಾರು ಜನಸ್ಪಂದನ ಕಾರ್ಯಕ್ರಮವನ್ನು ಕೂಡ ನಾನು ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಇದೆ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿಗಳಾದ ಸತೀಶ್ ಕೂಡಲಗಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ್ ರಾವ್ ದೇಶಪಾಂಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೆದಾರ್, ನಗರ ಸಭೆಯ ಸದಸ್ಯರು ಹಾಗೂ ತಾಲೂಕ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದರು.