ಅತ್ಯಾಚಾರಕ್ಕೊಳಗಾದ ಗರ್ಭಿಣಿ ಬಾಲಕಿ ಸಾವು: ದಲಿತ ಸೇನೆಯಿಂದ ಹಠಾತ್ ರಸ್ತೆ ತಡೆ ಚಳುವಳಿ
ಕಲಬುರಗಿ:ಜೂ.28: ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇದರಿಂದ ಉದ್ರಿಕ್ತಗೊಂಡ ದಲಿತ ಸೇನೆಯ ಕಾರ್ಯಕರ್ತರು ಶುಕ್ರವಾರ ಖ್ವಾಜಾ ಬಂದೇ ನವಾಜ್ ಆಸ್ಪತ್ರೆ ಮುಂದೆ ರಸ್ತೆ ತಡೆ ಚಳುವಳಿ ಮಾಡುವ ಮೂಲಕ ಆಕ್ರೋಶ ಹೊರಹಾಕಿದರು.
ದಲಿತ ಸೇನೆಯ ರಾಜ್ಯಾಧ್ಯಕ್ಷ ಹಾಗೂ ನ್ಯಾಯವಾದಿ ಹನುಮಂತ್ ಯಳಸಂಗಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದಲಿತ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ್ ಭಂಡಾರಿ ಅವರು ಮಾತನಾಡಿ, ಬಾಲಕಿ ಮೃತಪಟ್ಟಿದ್ದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ಪೋಲಿಸರು ಸಮರ್ಪಕವಾಗಿ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿ, ಅವರಿಗೆ ಎನ್‍ಕೌಂಟರ್ ಮಾಡಬೇಕು ಎಂದು ಒತ್ತಾಯಿಸಿದರು.
ಬಾಲಕಿಯ ತಾಯಿಯ ಹೇಳಿಕೆಯಂತೆ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ ಎನ್ನುವ ಅನುಮಾನ ಬರುತ್ತದೆ. ಕಾರಿನಲ್ಲಿ ನಮ್ಮ ಪ್ರದೇಶದಲ್ಲಿನ ಐದಾರು ಜನರು ವಾರಕ್ಕೆರಡು ಬಾರಿ ಬಂದು ಬಾಲಕಿಯನ್ನು ಬಲವಂತದಿಂದ ಕರೆದುಕೊಂಡು ಹೋಗುತ್ತಿದ್ದರು. ಬಾಲಕಿಯು ಎಂಟು ತಿಂಗಳು ಗರ್ಭಿಣಿ ಆಗಿದ್ದು, ನಿನ್ನೆ ಬಾಲಕಿಗೆ ಕೆಬಿಎನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಳಿಗ್ಗೆ 7 ಗಂಟೆಗೆ ಬರುತ್ತೇವೆ ಎಂದು ಬಾಲಕಿಯನ್ನು ದಾಖಲಿಸಿದವರು ಹೇಳಿ ಹೋದವರು ಬಂದಿಲ್ಲ. ಚಿಕಿತ್ಸೆ ಫಲಿಸದೇ ಬಾಲಕಿಯು ಮೃತಪಟ್ಟಿದ್ದಾಳೆ ಎಂದು ಅವರು ತೀವ್ರ ಆತಂಕ ಹೊರಹಾಕಿದರು.
ಬಾಲಕಿಯ ತಾಯಿಗೆ ಜೀವ ಬೆದರಿಕೆಯನ್ನು ಆರೋಪಿಗಳು ಹಾಕಿದ್ದಾರೆ. ನನ್ನ ಕಾಕಾನ ಪುತ್ರನೂ ಅದರಲ್ಲಿದ್ದಾನೆ. ಆತನ ಹೆಸರು ಹೇಳಿದರೆ ನಿನಗೆ ಜೀವ ಸಹಿತ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದು, ಈ ಕುರಿತು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರಧಾನಿ ಬೇಟಿ ಪಡಾವೋ ಬೇಟಿ ಬಚಾವೋ ಎಂದು ಹೇಳುತ್ತಾರೆ. ಬಾಲಕಿಯರನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಇನ್ನು ಕಾಂಗ್ರೆಸ್ ಪಕ್ಷವೂ ಸಹ ಸಂಪೂರ್ಣ ವಿಫಲವಾಗಿದೆ. ಆಸ್ಪತ್ರೆಗೆ ಡಿಸಿಪಿ ಭೇಟಿ ಮಾಡಬೇಕಿತ್ತು. ಗ್ರಾಮೀಣ ಪೋಲಿಸ್ ಠಾಣೆಯ ಇನ್‍ಸ್ಪೆಕ್ಟರ್ ಆಸ್ಪತ್ರೆಗೆ ತಕ್ಷಣವೇ ಭೇಟಿ ನೀಡಬೇಕಿತ್ತು. ಈಗ ಪ್ರಕರಣದಲ್ಲಿ ಒಬ್ಬನಿಗೆ ಬಂಧಿಸಿದ್ದೇವೆ ಎಂದು ಹೇಳುತ್ತಾರೆ. ಆದಾಗ್ಯೂ, ಆರೋಪಿಗಳು ಬಳಸಿರುವ ಕಾರು ಮಾತ್ರ ಇನ್ನೂ ತಮ್ಮ ವಶಕ್ಕೆ ತೆಗೆದುಕೊಂಡಿಲ್ಲ ಎಂದು ಅವರು ತೀವ್ರ ಆಕ್ರೋಶ ಹೊರಹಾಕಿದರು.
ಕೂಡಲೇ ಕಾರು ಜಪ್ತಿಯೊಂದಿಗೆ ಎಲ್ಲ ಆರೋಪಿಗಳನ್ನು ಬಂಧಿಸಿ ಅವರಿಗೆ ಮರಣದಂಡನೆ ಗುರಿಪಡಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ರಸ್ತೆ ತಡೆ ಚಳುವಳಿಯಿಂದಾಗಿ ಆರ್ಕಿಡ್ ಮಾಲ್ ಮುಂದಿನ ರಸ್ತೆಗಳ ಉಭಯ ಮಾರ್ಗಗಳಲ್ಲಿ ವಾಹನಗಳ ಸಂಚಾರಕ್ಕೆ ಕೆಲ ಹೊತ್ತು ವ್ಯತ್ಯಯಗೊಂಡಿತು. ಪ್ರತಿಭಟನೆಕಾರರು ರಸ್ತೆ ಮೇಲೆ ಕುಳಿತು ಘಟನೆಯನ್ನು ಖಂಡಿಸಿದರು. ಆರೋಪಿಗಳಿಗೆ ಎನ್‍ಕೌಂಟರ್ ಆಗಬೇಕು ಎಂಬ ಘೋಷಣೆಗಳನ್ನು ಹಾಕಿದರು. ಬಾಲಕಿಯ ಸಾವಿನಿಂದ ರೋಧಿಸುತ್ತಿದ್ದ ಕುಟುಂಬಸ್ಥರಿಗೆ ದಲಿತ ಸೇನೆಯ ಕಾರ್ಯಕರ್ತರು ಸಾಂತ್ವನ ಹಾಗೂ ಧೈರ್ಯವನ್ನು ಹೇಳುವುದರೊಂದಿಗೆ ನ್ಯಾಯ ಕೊಡಿಸುವ ಭರವಸೆಯನ್ನೂ ಸಹ ನೀಡಿದರು.