ಅಪರಿಚಿತ ವ್ಯಕ್ತಿಗಳು ಲೋಕಾಯುಕ್ತ ಹೆಸರಿನಲ್ಲಿ ಪೋನ್ ಮಾಡಿತಮ್ಮನ್ನು ಹೆದರಿಸುತ್ತಿದ್ದಲ್ಲಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ
ಕಲಬುರಗಿ:ಜೂ.28: ಅಪರಿಚಿತ ವ್ಯಕ್ತಿಗಳು ಸರ್ಕಾರಿ ಅಧಿಕಾರಿ/ನೌಕರರ ಹೆಸರು ಮೋಬೈಲ್ ಸಂಖ್ಯೆಗಳನ್ನು ತಿಳಿದುಕೊಂಡು, ಮೊಬೈಲ್ ಸಂಖ್ಯೆ 9156540734 ಹಾಗೂ ಇತರೆ ನಂಬರಗಳಿಂದ ಕರೆ ಮಾಡಿ ತಾನು ಡಿ.ಎಸ್‍ಪಿ, ಲೋಕಾಯುಕ್ತ ಬೆಂಗಳೂರು/ಕಲಬುರಗಿ/ಬೀದರ/ ಅಥವಾ ಯಾದಗಿರ ಎಂದು ಬಿಂಬಿಸಿಕೊಂಡು ಸರ್ಕಾರಿ ಅಧಿಕಾರಿ/ನೌಕರರಿಗೆ ತಮ್ಮ ವಿರುದ್ಧ ಲೋಕಾಯುಕ್ತದಲ್ಲಿ ದೂರು ಇದೆ ಎಂದು ತಿಳಿಸಿ, ತನ್ನನ್ನು ಕಾಣುವಂತೆ ನಿಗದಿತ ಸ್ಥಳಕ್ಕೆ ಬರಲು ತಿಳಿಸಿ ಅಲ್ಲದೆ ಗೂಗಲ್ ಪೇ ಅಥವಾ ಪೋನ್ ಪೇ ಅಥವಾ ಅಕೌಂಟ ನಂಬರಿಗೆ ಮೂಲಕ ಹಣ ಹಾಕಲು ಬೆದರಿಕೆ ಹಾಕುತ್ತಿದ್ದು, ಇದಲ್ಲದೆ ಸರ್ಕಾರಿ ಅಧಿಕಾರಿಗಳಿಗೆ ಒಂದು ವೇಳೆ ತಾವು ತಿಳಿಸಿದ ಸ್ಥಳಕ್ಕೆ ಬರದೇ ಇದ್ದರೆ ತಮ್ಮ ಮೇಲೆ ಲೋಕಾಯುಕ್ತ ರೇಡ್ ಅಥವಾ ಟ್ರ್ಯಾಪ್ ಮಾಡುತ್ತೇವೆ ಎಂಬುವುದಾಗಿ ಹೆದರಿಸುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ ಎಂದು ಕಲಬುರಗಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಆ್ಯಂಟನಿ ಜಾನ್ ಜೆ.ಕೆ. ಅವರು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಎಲ್ಲಾ ಸರ್ಕಾರಿ ಅಧಿಕಾರಿ/ನೌಕರರು ಈ ರೀತಿಯಾಗಿ ಯಾವುದೇ ಪೋನ್ ಕರೆ ಮಾಡಿ ಲೋಕಾಯುಕ್ತ ಹೆಸರಿನಲ್ಲಿ ತಮ್ಮನ್ನು ಹೆದರಿಸುತ್ತಿದ್ದರೆ, ಇದನ್ನು ತಮ್ಮ ಫೋನ್‍ನಲ್ಲಿ ರೆಕಾರ್ಡ ಮಾಡಿಕೊಂಡು ತಕ್ಷಣದಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬೇಕು. ಈ ಕುರಿತು ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಕಲಬುರಗಿ ಮೊಬೈಲ್ ನಂಖ್ಯೆ 9364062519, ದೂರವಾಣಿ ಸಂಖ್ಯೆ 08472-295364 ಗೆ ಮಾಹಿತಿ ನೀಡಬೇಕೆಂದು ಅವರು ತಿಳಿಸಿದ್ದಾರೆ.