ಕಾವಲುಗಾರನ ಮೇಲೆ ಹಲ್ಲೆ ನಡೆಸಿ ಮೊಬೈಲ್, ಹಣ ಸುಲಿಗೆ: ಮೂವರ ಬಂಧನ
ಕಲಬುರಗಿ,ಜೂ.28-ನಗರದ ಸ್ಕ್ಯಾನಿಂಗ್ ಸೆಂಟರ್ ಒಂದರ ಮುಂದೆ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಸ್ಯಾಮ್‍ಸಂಗ್ ಎ12 ಮೊಬೈಲ್ ಮತ್ತು 500 ರೂ.ನಗದು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ಮೂವರನ್ನು ಬ್ರಹ್ಮಪುರ ಪೊಲೀಸರು ಬಂಧಿಸಿದ್ದಾರೆ.
ನಗರದ ಸ್ಕ್ಯಾನಿಂಗ್ ಸೆಂಟರ್ ಒಂದರ ಮುಂದೆ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದ ಮಿಜಗುರಿ ನಯಾ ಮೋಹಲ್ಲಾದ ಸಾಬೀರ್ ಅಹೆಮದ್ ಅವರ ಮೇಲೆ ಮೂವರು ಅಪರಿಚಿತರು ಮಚ್ಚಿನಿಂದ ಹಲ್ಲೆ ನಡೆಸಿ ಮೊಬೈಲ್ ಮತ್ತು 500 ರೂ.ನಗದು ಸುಲಿಗೆ ಮಾಡಿದ್ದರು.
ಸಾಬೀರ್ ಅಹೆಮದ್ ಅವರು ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್, ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಭೂತೇಗೌಡ ವಿ.ಎಸ್.ಅವರ ಮಾರ್ಗದರ್ಶನದಲ್ಲಿ ಬ್ರಹ್ಮಪುರ ಪಿಐ ಸೋಮಲಿಂಗ ಕಿರದಳ್ಳಿ ಅವರ ನೇತೃತ್ವದಲ್ಲಿ ಪಿಎಸ್‍ಐ ಸುಭಾಷಚಂದ್ರ, ಸಿಬ್ಬಂದಿಗಳಾದ ಶಿವಪ್ರಕಾಶ, ಕೇಸುರಾಯ, ವಿಶ್ವನಾಥ, ರಾಮು ಪವಾರ, ನವೀನ್ ಕುಮಾರ್ ಅವರು ತನಿಖೆ ನಡೆಸಿ ಶೇಖ್ ಜುನೈದ್ ತಂದೆ ಫಿರೋಜ್ ಮೀಯಾ, ಮಹ್ಮದ್ ಪರ್ವೇಜ್ ತಂದೆ ಅಬ್ದುಲ್ ಗನಿ ಶೇಖ್ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನೊಬ್ಬನನ್ನು ಬಂಧಿಸಿ ಸ್ಯಾಮ್ ಸಂಗ್ ಎ12 ಮೊಬೈಲ್, ಕೃತ್ಯಕ್ಕೆ ಬಳಸಿದ ಬಜಾಜ್ ಪಲ್ಸರ್ 220 ಬೈಕ್ ಜಪ್ತಿ ಮಾಡಿದ್ದಾರೆ.