ಬಸ್ ಹತ್ತುವಾಗ 40 ಗ್ರಾಂ.ಬಂಗಾರದ ತಾಳಿ ಚೈನ್ ಕಳವು: ಇಬ್ಬರು ಮಹಿಳೆಯರ ಬಂಧನ
ಕಲಬುರಗಿ,ಜೂ.28-ಬಸ್ ಹತ್ತುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‍ನಲ್ಲಿದ್ದ 40 ಗ್ರಾಂ.ಬಂಗಾರದ ತಾಳಿ ಚೈನ್ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಪುರ ಪೊಲೀಸರು ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ.
ಬಾಪುನಗರದ ಮಾಂಗರವಾಡಿ ಗಲ್ಲಿಯ ಶಕೀಲಾಬಾಯಿ ಗಂಡ ಶಖಾ ಉಪಾಧ್ಯ (75) ಮತ್ತು ಲಕ್ಷ್ಮೀ ಗಂಡ ಭೀಮಾ ಸಕಟ (30) ಎಂಬುವವರನ್ನು ಬಂಧಿಸಿ 2.48 ಲಕ್ಷ ರೂ.ಮೌಲ್ಯದ 40 ಗ್ರಾಂ.ಬಂಗಾರದ ತಾಳಿ ಚೈನ್ ಜಪ್ತಿ ಮಾಡಿದ್ದಾರೆ.
ಗಾಲಿಬ್ ಕಾಲೋನಿಯ ಪ್ರೇಮಾ ಮಾನಕರ್ ಅವರು ತಮ್ಮ ತಾಯಿಯೊಂದಿಗೆ ತವರು ಮನೆಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತುವಾಗ ವ್ಯಾನಿಟಿ ಬ್ಯಾಗ್‍ನಲ್ಲಿದ್ದ 40 ಗ್ರಾಂ.ಬಂಗಾರದ ತಾಳಿ ಚೈನ್ ಕಳವಾಗಿತ್ತು. ಈ ಬಗ್ಗೆ ಅವರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್, ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಭೂತೇಗೌಡ ವಿ.ಎಸ್.ಅವರ ಮಾರ್ಗದರ್ಶನದಲ್ಲಿ ಬ್ರಹ್ಮಪುರ ಪಿಐ ಸೋಮಲಿಂಗ ಕಿರದಳ್ಳಿ ಅವರ ನೇತೃತ್ವದಲ್ಲಿ ಪಿಎಸ್‍ಐ ಸುಭಾಷಚಂದ್ರ, ಸಿಬ್ಬಂದಿಗಳಾದ ಶಿವಪ್ರಕಾಶ, ರಾಮು ಪವಾರ, ನವೀನಕುಮಾರ ಅವರು ತನಿಖೆ ನಡೆಸಿ ಶಕೀಲಾಬಾಯಿ ಉಪಾಧ್ಯ ಮತ್ತು ಲಕ್ಷ್ಮೀ ಸಕಟ ಅವರನ್ನು ಬಂಧಿಸಿ 2.48 ಲಕ್ಷ ರೂ.ಮೌಲ್ಯದ 40 ಗ್ರಾಂ.ಬಂಗಾರದ ತಾಳಿ ಜೈನ್ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಚೇತನ್ ಆರ್.ಅವರು ಶ್ಲಾಘಿಸಿದ್ದಾರೆ.