ಕಲ್ಲುಗಣಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು
ವಾಡಿ,ಜೂ.28-ಆಟವಾಡಲು ಜತೆಯಾಗಿ ತೆರಳಿದ ಇಬ್ಬರು ಬಾಲಕರು ಕಲ್ಲುಗಣಿಯ ಹೊಂಡದಲ್ಲಿ ಶವವಾಗಿ ಪತ್ತೆಯಾದ ಘಟನೆ ರಾವೂರು ಗ್ರಾಮದಲ್ಲಿ ಗುರುವಾರ ಸಂಜೆ ಜರುಗಿದೆ.
ಗ್ರಾಮದ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಹತ್ತಿರದ ತೆರೆದ ಕಲ್ಲುಗಣಿಯ ಬಾವಿಯು ದುರಂತಕ್ಕೆ ಕಾರಣವಾಗಿದ್ದು, ಪುಟ್ಟ ಮಕ್ಕಳನ್ನು ಕಳೆದುಕೊಂಡ ಕುಟುಂಬದವರ ಆಕ್ರಂಧನ ಮುಗಿಲು ಮುಟ್ಟಿದೆ.
ರಾವೂರು ಗ್ರಾಮದ ರವಿ ಗುತ್ತೆದಾರ ಅವರ ಪುತ್ರ 5 ವರ್ಷದ ಭುವನ್ ಹಾಗೂ ಅಶೋಕ ಬೆಟಗೇರಿ ಅವರ ಪುತ್ರ 6 ವರ್ಷದ ಕಾಶೆಪ್ಪ ಮೃತ ದುರ್ದೈವಿಗಳು.
ಘಟನೆ ವಿವರ
ಗ್ರಾಮದ ವಿವೇಕಾನಂದ ಶಿಶು ವಿಹಾರ ಶಾಲೆಯಲ್ಲಿ ಓದುತ್ತಿದ್ದ ಭುವನ್ ಹಾಗೂ ಕಾಶೆಪ್ಪ ಇಬ್ಬರು ಬಾಲಕರು ಮನೆಯಿಂದ ಬೆಳಿಗ್ಗೆ ಆಟವಾಡಲು ತೆರಳಿದ್ದಾರೆ. ಬಹಳ ಹೊತ್ತಾದರೂ ಬಾರದೇ ಇದ್ದಾಗ ಸಂಬಂಧಿಕರು ಹುಡುಕಲು ಆರಂಭಿಸಿದ್ದಾರೆ. ಬಾಲಕರ ಪೆÇೀಟೋಗಳನ್ನು ವಾಟ್ಸಪ್ ಮೂಲಕ ಹರಿಬಿಟ್ಟು ಪತ್ತೆಗೆ ಮನವಿ ಮಾಡಿದ್ದಾರೆ. ಗ್ರಾಮದ ಸುತ್ತಲಿನ ಕಲ್ಲು ಗಣಿಗಳ ತುಂಬಾ ಹುಡುಕಲು ಆರಂಭಿಸಿದ್ದಾರೆ. ಓರ್ವ ಬಾಲಕನ ಬಟ್ಟೆ ಹಾಗೂ ಆಟವಾಡಲು ಬಳಸುತ್ತಿದ್ದ ಟೈಯರ್ ಗಾಲಿ ಗಣಿಯ ಪಕ್ಕದಲ್ಲಿ ಇರುವುದನ್ನು ನೋಡಿ ಅನುಮಾನಗೊಂಡು ಹುಡುಕಲು ಆರಂಭಿಸಿದಾಗ ಮೃತ ಸ್ಥಿತಿಯಲ್ಲಿ ಇಬ್ಬರು ಬಾಲಕರ ಶವಗಳು ಪತ್ತೆಯಾಗಿವೆ. ಈಜಾಡಲು ತೆರಳಿರಬಹುದು ಅಥವಾ ಕಾಲು ಜಾರಿ ಬಿದ್ದಿರಬಹುದು ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಂಕರಗೌಡ ಪಾಟೀಲ ಹಾಗೂ ವಾಡಿ ಠಾಣೆಯ ಪಿಎಸ್‍ಐ ತಿರುಮಲೇಶ ಕುಂಬಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.