ಮೆಕ್ಯಾನಿಕ್ ಆತ್ಮಹತ್ಯೆ
ಬೆಂಗಳೂರು,ಜೂ.೨೮-ಸಾಲ ಮಾಡಿ ಬಡ್ಡಿ ಕಟ್ಟಲಾಗದೆ ನೊಂದ ಮೆಕ್ಯಾನಿಕ್‌ರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ನಗರದ ರೋಜಿಪುರ ಬಡಾವಣೆಯ ಪರ್ವೀಜ್ ಪಾಷ (೩೮) ಆತ್ಮಹತ್ಯೆ ಮಾಡಿಕೊಂಡವರು, ಮೆಕ್ಯಾನಿಕ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಪರ್ವೀಜ್ ಹಿಂದೆ ಹಲವು ವ್ಯಕ್ತಿಗಳ ಬಳಿ ಬಡ್ಡಿಗೆ ಸಾಲ ಪಡೆದಿದ್ದರು.
ಸಾಲಗಾರರ ಕಾಟ ತಡೆಯಲಾರದೇ ಮನನೊಂದಿದ್ದ ಅವರು ಸಾಲ ತೀರಿಸಲು ದಿಕ್ಕು ದೋಚದೆ ಮೂರು ದಿನ ಊಟ ಬಿಟ್ಟಿದ್ದರು.
ಅಂಗಡಿ ಮುಂದೆ ಸಾಲಗಾರರ ಕಾಟ ಹೆಚ್ಚಾದಾಗ ಕಳೆದ ನಾಲ್ಕು ದಿನಗಳ ಹಿಂದೆ ಮನೆಗೆ ಬಂದವರೇ ಇಲಿ ಪಾಷಣ ಸೇವಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಪರ್ವೀಜ್ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಪರ್ವೀಜ್ ಸಾವನ್ನಪ್ಪಿದ್ದಾನೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ದೊಡ್ಡಬಳ್ಳಾಪುರ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.