ಮುಧೋಳ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ
ಮುಧೋಳ,ಜೂ.28: ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ತಾಯಿ ಮತ್ತು ಮಗು ಆರೋಗ್ಯ ಕೇಂದ್ರ ಸ್ಥಾಪಿಸಿ, ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಅವರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಜನರಲ್ ವಾರ್ಡ್, ಹೆರಿಗೆ ವಾರ್ಡ್, ಶಸ್ತ್ರ ಚಿಕಿತ್ಸೆ ವಿಭಾಗ, ಡಯಾಲಸಿಸ್ ವಿಭಾಗ, ರಕ್ತಪರೀಕ್ಷೆ ವಿಭಾಗ, ಆಕ್ಸಿಜನ್ ಪ್ಲಾಂಟ್, ಸ್ಕ್ಯಾನಿಂಗ್ ವಿಭಾಗ, ಕರ್ನಾಟಕ ಆಯುಷ್ಮಾನ ಭಾರತ ವಿಭಾಗ, ಓಪಿಡಿ ವಿಭಾಗ, ಚಿಕ್ಕಮಕ್ಕಳ ಆರೋಗ್ಯ ವಿಭಾಗ, ಹೀಗೆ ಆಸ್ಪತ್ರೆಯ ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿ ಆಯಾ ವಿಭಾಗಗಳಲ್ಲಿನ ತೊಂದರೆ, ಸಮಸ್ಯೆಗಳನ್ನು ಪರಿಶೀಲಿಸಿ ಅಲ್ಲಿನ ಹೊರ ಮತ್ತು ಒಳ ರೋಗಿಗಳನ್ನು ಭೇಟಿ ಮಾಡಿ ಆಸ್ಪತ್ರೆಯಲ್ಲಿರುವ ತೊಂದರೆಗಳ ಬಗ್ಗೆ ವಿಚಾರಿಸಿ ಅಲ್ಲಿನ ಸೌಲಭ್ಯಗಳ ಬಗ್ಗೆ ವೈದ್ಯಾಧಿಕಾರಿಗಳ ಜೊತೆ ಮಾತನಾಡಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿರ್ದೇಶನ ನೀಡಿದರು.
ವೈದ್ಯರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ಔಷಧೋಪಚಾರ, ಜನಸಾಮಾನ್ಯರಿಗೆ ದೊರಕಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಆದ್ಯತೆ ನೀಡಿದೆ. ಪತ್ರಕರ್ತರು ಪ್ರತಿ ತಿಂಗಳು ಸುಮಾರು 200 ಕ್ಕೂ ಹೆಚ್ಚು ಹೆರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಆಗುತ್ತಿದ್ದು ಇಲ್ಲಿ ಒಬ್ಬರೇ ಸ್ತ್ರೀ ರೋಗ ತಜ್ಞರಿರುವುದರಿಂದ ಇನ್ನೊಬ್ಬ ಸ್ತ್ರೀರೋಗ ತಜ್ಞರ ಅವಶ್ಯಕತೆ ಇದೆ ಎಂದು ತಿಳಿಸಿದಾಗ, ಹೆರಿಗೆ ವಿಭಾಗಕ್ಕೆ ಇನ್ನೊಬ್ಬ ಸ್ತ್ರೀ ರೋಗ ತಜ್ಞರನ್ನು ಶೀಘ್ರದಲ್ಲಿ ನೇಮಿಸುವುದಾಗಿ ಹೇಳಿದರು. ಅಲ್ಲದೇ ಇನ್ನುಳಿದ ತಜ್ಞ ವೈದ್ಯರನ್ನು ನೇಮಿಸಿ ಇಲ್ಲಿರುವ ಕೊರತೆಯನ್ನು ನೀಗಿಸುವುದಾಗಿ ಅವರು ಭರವಸೆ ನೀಡಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಅವಶ್ಯಕತೆ ಇರುವ ಕೆಲ ಟೆಕ್ನಿಶಿಯನ್‍ಗಳನ್ನು ತೆಗೆದುಕೊಳ್ಳಲು ಅವರು ಡಿಎಚ್‍ಓ ಅವರಿಗೆ ಅನುಮತಿ ನೀಡಿದರು. ಈ ಸಂದರ್ಭದಲ್ಲಿ ಇಲಾಖೆಯ ಹರ್ಷಗುಪ್ತ, ಎನ್‍ಎಚ್‍ಎನ್ ಆಯಕ್ತ ರಣದೀಪ, ನಿರ್ದೇಶಕ ನವೀನ ಭಟ್, ಡಾ.ಅನಂತರಾವ್ ದೇಸಾಯಿ, ಡಾ.ಜಿ.ಎನ್.ಶ್ರೀನಿವಾಸ, ಡಿಎಚ್‍ಓ ಜಯಶ್ರೀ ಎಮ್ಮಿ, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ಟಿಎಚ್‍ಓ ಡಾ.ವೆಂಕಟೇಶ ಮಲಘಾಣ, ಡಾ.ಅಶೋಕ ಸೂರ್ಯವಂಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಹನಮಂತ ತಿಮ್ಮಾಪೂರ, ಸಿಪಿಐ ಮಹಾದೇವ ಶಿರಹಟ್ಟಿ, ಪಿಎಸ್‍ಐ ಅಜೀತಕುಮಾರ ಹೊಸಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.