ಸಾರ್ವಜನಿಕ ಸೇವೆ ನಿರ್ಲಕ್ಷಿಸಿದರೆ ಶಿಸ್ತು ಕ್ರಮ ಗ್ಯಾರಂಟಿ – ಶಾಸಕ ಡಾ ಶ್ರೀನಿವಾಸ ಖಡಕ್ ಎಚ್ಚರಿಕೆ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ.28 :- ತಾಲೂಕಿನಲ್ಲಿ ಸಾರ್ವಜನಿಕರು ಸರಕಾರಿ ಕಚೇರಿಗಳಿಗೆ ಸಣ್ಣಪುಟ್ಟ ಕೆಲಸಗಳಿಗೂ ಅಲೆದಾಡುವಂತಾಗಿದೆ. ಹೀಗಾಗಿ, ತಾಲೂಕಿನ ಅಧಿಕಾರಿಗಳು ನಿದ್ದೆಯಿಂದ ಎದ್ದು ಸೇವೆಯಲ್ಲಿ ತೊಡಗಿಕೊಳ್ಳಿ. ನಿಮ್ಮ ಕಾರ್ಯವೈಖರಿ ಬದಲಾಗದಿದ್ದರೆ ಕ್ರಮಕೈಗೊಳ್ಳುವುದು ಗ್ಯಾರಂಟಿ ಎಂದು ಅಧಿಕಾರಿಗಳಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್  ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾರ್ವಜನಿಕರಿಗೆ ಸರಕಾರದ ಯೋಜನೆಗಳ ಸದುಪಯೋಗ ಸೇರಿ ನಾನಾ ಕುಂದು, ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹೆಚ್ಚಿನ ಹೆಚ್ಚಿನ ಆದ್ಯತೆ ನೀಡಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರಿಗೆ ಸ್ಪಂದನೆ ಸಿಗದಂತಾಗಿದೆ. ಹಾಗಾಗಿ, ತಾಲೂಕಿನ ಅಧಿಕಾರಿಗಳು ಜವಾಬ್ದಾರಿಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸವ ಮೂಲಕ ಜನಸಾಮಾನ್ಯರಿಗೆ ಸ್ಪಂದಿಸಿ. ಜನತಾ ದರ್ಶನದಲ್ಲಿ ಬಂದಿರುವ ಅರ್ಜಿಗಳಿಗೆ ಶೀಘ್ರವೇ ಪರಿಹಾರ ಸಿಗಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದು, ಗೋವಿಂದಗಿರಿ ತಾಂಡಾ ಕಂದಾಯ ಗ್ರಾಮ ಮಾಡುವುದು ಹಾಗೂ ಸ್ಥಗಿತವಾಗಿರುವ ಶುದ್ಧ ಕುಡಿವ ನೀರಿನ ಘಟಕ ಜನರಿಗೆ ಉಪಯೋಗವಾಗಲಿ ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು. ಮಹದೇವಪುರ ಗ್ರಾಮದಲ್ಲಿರುವ ಅಂಗನವಾಡಿ ಕಟ್ಟಡದ ಜಾಗ ಒತ್ತುವರಿಯಾಗಿದ್ದು, ಕೊಳಚೆ ನೀರು ಹರಿಯಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಒತ್ತುವರಿ ತೆರವು ಮಾಡಿಸಲು ಗ್ರಾಪಂ ಸದಸ್ಯರು ಸೇರಿ ಮುಖಂಡರು ಮನವಿ ಸಲ್ಲಿಸಿದರು. ಕೆ.ರಾಯಾಪುರ ಗ್ರಾಮದ ಸರಕಾರಿ ಶಾಲೆಗೆ ದಾನವಾಗಿ ಕೊಟ್ಟಿರುವ ಸರ್ವೆನಂ೪೬೩ ಬಿ ಆಸ್ತಿಯ ೨ ಎಕರೆ ಜಾಗದಲ್ಲಿ ಕೆಲವರು ಅಕ್ರಮವಾಗಿ ಪ್ರಕರಣಗಳನ್ನು ಹಾಕಿದ್ದಾರೆ. ಹೀಗಾಗಿ, ಸರಕಾರಿ ಶಾಲೆಗೆ ಜಾಗ ಬಿಡಿಸಿಕೊಡುವಂತೆ ಸಾಕಷ್ಟು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಕೃಷ್ಣಮೂರ್ತಿ ಸೇರಿ ಗ್ರಾಮಸ್ಥರು ಡಿಸಿಗೆ ಅಹವಾಲು ಸಲ್ಲಿಸಿದರು. ಕುಡಿವ ನೀರು, ಪಿಂಚಣಿ, ಪಡಿತರ ಚೀಟಿ, ಮಾಸಾಶನ, ಜಮೀನಿಗೆ ದಾರಿ, ಸ್ಮಶಾನ, ವಸತಿ, ಅಂಗನವಾಡಿ ಸೇರಿ ನಾನಾ ಸಮಸ್ಯೆಗಳ ಅರ್ಜಿ ಸ್ವೀಕರಿಸಿದ ಡಿಸಿ ದಿವಾಕರ ಅವರು ಕೆಲವು ಸ್ಥಳದಲ್ಲೇ ಪರಿಹಾರ ಸಿಗಲು ಸಂಬಂಧಿಸಿ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಸದಾಶಿವ ಬಿ.ಪ್ರಭು, ಸಹಾಯಕ ಆಯುಕ್ರ ನೊಂಗಾಯ್ಡ್ ಮಹಮ್ಮದ್ ಅಕ್ರಂ ಷಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ರ‍್ಸಲನ್, ತಹಸೀಲ್ದಾರ್ ಎಂ.ರೇಣುಕಾ, ತಾಪಂ ಇಒ ವೈ.ರವಿಕುಮಾರ್ ಸೇರಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಬಾಕ್ಸ್ ಐಟಂ
ವೀಲ್‌ಚೇರ್‌ನಲ್ಲಿ ಬಂದಿದ್ದ ನಿವೃತ್ತ ಯೋಧ
ಎರಡೂ ಕಾಲು ಕಳೆದುಕೊಂಡು ಅಂಗವಿಕಲನಾಗಿದ್ದು, ನಿವೃತ್ತನಾದ್ದರೂ ರಾಜ್ಯ ಸರಕಾರ ನಿವೇಶನ, ಮನೆ, ಜಮೀನು ನೀಡಿಲ್ಲ. ಇದರಿಂದ ಕುಟುಂಬದ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ವೀಲ್‌ಚೇರ್‌ನಲ್ಲಿ ಆಗಮಿಸಿದ್ದ ಸಿಆರ್‌ಪಿಎಸ್ ನಿವೃತ್ತ ಯೋಧ ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ಗ್ರಾಮದ ಶಕೀಲ್ ಬಾಷಾ ಡಿಸಿಯವರಿಗೆ ಮನವಿ ಸಲ್ಲಿಸಿದರು. ಅಕ್ರಮ ಸಕ್ರಮ ಅರ್ಜಿಗಳಿಗೆ ಶೀಘ್ರ ಪಟ್ಟಾ ನೀಡುವುದು, ಪಿಟಿಸಿಎಲ್ ಕಾಯ್ದೆಗೆ ಒಳಪಡುವ ಜಮೀನುಗಳ ತೀರ್ಮಾನ ಬಗೆಹರಿಸುವುದು ಸೇರಿ ನಾನಾ ಸಮಸ್ಯೆಗಳ ಕುರಿತು ದಸಂಸ ಜಿಲ್ಲಾ ಸಂಚಾಲಕ ಎಸ್.ದುರುಗೇಶ್ ನೇತೃತ್ವದಲ್ಲಿ ಮುಖಂಡರು ಮನವಿ ಸಲ್ಲಿಸಿದರು.
ಬಾಕ್ಸ್ ಐಟಂ
ಬಿಇಒಗೆ ನೋಟಿಸ್ ಕೊಡಿ
ಶಾಲೆಗಳಲ್ಲಿ ಬಿಸಿಯೂಟ ವಿವರ ಸೇರಿ ಯಾವುದೇ ವಿಷಯ ಸೂಚಿಸಿದ  ಕುರಿತು ಕೇಳಿದರೂ ಗೊತ್ತಿಲ್ಲ ಎಂದು ಹೇಳುತ್ತಿರುವ ಬಿಇಒಗೆ ನೋಟಿಸ್ ನೀಡುವಂತೆ ಶಿಕ್ಷಣ ಇಲಾಖೆ ಮೇಲಧಿಕಾರಿಗಳಿಗೆ ಡಿಸಿ ದಿವಾಕರ್ ಸೂಚಿಸಿದರು. ಅಲ್ಲದೆ, ಮನೆ ಬಾಗಿಲಿಗೆ ಇ ಸ್ವತ್ತು ನೀಡದೇ ಇರುವ ಪಿಡಿಒಗಳ ವಿರುದ್ಧ ಗರಂ ಆದರು.