ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಅಚ್ಚುಕಟ್ಟಾಗಿನಡೆಯಲಿ: ಅಪರ ಜಿಲ್ಲಾಧಿಕಾರಿ
ಹೊಸಪೇಟೆ (ವಿಜಯನಗರ) ಜೂನ್ 28: ವಿಜಯನಗರ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2024ಯು ಅಚ್ಚುಕಟ್ಟಾಗಿ ನಡೆಯುವಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಜಿ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಿಲ್ಲಾಡಳಿತ ಭವನದಲ್ಲಿನ ವಿಡಿಯೋ ಸಂವಾದ ಸಭಾಂಗಣದಲ್ಲಿ ಜೂನ್ 27ರಂದು ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಈ ಹಿಂದೆ ವಿಡಿಯೋ ಸಂವಾದ ನಡೆಸಿ ಆಯಾ ಜಿಲ್ಲೆಗಳಲ್ಲಿ ಈ ಪರೀಕ್ಷೆಯು ಸುಗಮವಾಗಿ ನಡೆಯಬೇಕು ಎಂದು ಸೂಚಿಸಿದಂತೆ ಎಲ್ಲಾ ರೀತಿಯ ಅಗತ್ಯ ಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪರಿಶ್ರಮವಹಿಸಿ ಸತತ ಅಧ್ಯಯನ ಮಾಡಿದ ಯಾವುದೇ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಅನ್ಯಾಯವಾಗಬಾರದು. ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಯು ಇಂತಹ ಸಾಮಾಜಿಕ ಕಾಳಜಿಯೊಂದಿಗೆ ಕಾರ್ಯನಿರ್ವಹಿಸಬೇಕು. ಪರೀಕ್ಷೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆಯದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಅವ್ಯವಹಾರಗಳನ್ನು ತಡೆಗಟ್ಟಲು ಸೂಕ್ತ ಕ್ರಮಕ್ಕಾಗಿ ಮತ್ತು ಪ್ರತಿ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂರು ಬರುವ ಹಿತದೃಷ್ಟಿಯಿಂದ ಈ ಪರೀಕ್ಷೆ ನಡೆಯುವ 15 ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಆವರಣವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಿ ಜಿಲ್ಲಾಧಿಕಾರಿಗಳು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಈ ಪರೀಕ್ಷಾ ಗೌಪ್ಯ ಸಾಮಗ್ರಿಗಳ ಬಂಡಲ್‌ಗಳನ್ನು ಸ್ವೀಕರಿಸಿ ಖಜಾನೆಯ ಭದ್ರತಾ ಕೊಠಡಿಯಲ್ಲಿ ಅಭಿರಕ್ಷಿಸುವ ಹಾಗೂ ಪರೀಕ್ಷಾ ದಿನದಂದು ಮಾರ್ಗಾಧಿಕಾರಿಗಳಿಗೆ ವಿತರಿಸುವ ಸಂಬಂಧ ಜಿಲ್ಲಾಧಿಕಾರಿಗಳು ತ್ರಿಸದಸ್ಯ ಸಮಿತಿ ರಚಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ವಿಜಯನಗರ ಜಿಲ್ಲೆಯ ಒಟ್ಟು 15 ಪರೀಕ್ಷಾ ಕೇಂದ್ರಗಳಲ್ಲಿ ಜೂನ್ 30ರಂದು ಪರೀಕ್ಷೆ ನಡೆಯಲಿದೆ. ಅಂದು 1ನೇ ಅವಧಿಯ ಸಮಯ ಬೆಳಗ್ಗೆ 9.30 ರಿಂದ ಮಧ್ಯಾಹ್ನ 12ರವರೆಗೆ ಇರುತ್ತದೆ. 2ನೇ ಅವಧಿಯ ಸಮಯ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4.30ರವರೆಗೆ ಇರುತ್ತದೆ. ಅಂದು ಆರು ಅಧಿಕಾರಿಗಳು ಮಾರ್ಗಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಪರೀಕ್ಷೆಗೆ ಮುಖ್ಯ ಅಧೀಕ್ಷರ ನೇಮಕ ಮಾಡಲಾಗಿದೆ. ಜೊತೆಗೆ ಜಾಗೃತ ದಳವನ್ನು ನೇಮಕ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಹೆಚ್.ಎಂ.ಹುಲಿಬಂಡಿ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ತಹಸೀಲ್ದಾರ ವಿಶ್ವಜಿತ್ ಮೆಹತಾ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹರೀಶ್, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಪರೀಕ್ಷೆಗೆ ನಿಯೋಜನೆಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯ ಅಧೀಕ್ಷಕರು ಹಾಗೂ ಇನ್ನೀತರರು ಇದ್ದರು.
One attachment • Scanned by Gmail