ಮರಡಿ ದುರುಗಮ್ಮ  ದೇವಿಯ ಜಾತ್ರೆ
ಉಮಾಪತಿ ಶೆಟ್ಟರ್
 ಹಗರಿಬೊಮ್ಮನಹಳ್ಳಿ. ಜೂ.28 ಊರಮ್ಮ, ಕರಿಯಮ್ಮ,ಮಾಯಮ್ಮ ಹೆಣ್ಣು ದೇವತೆಗಳಿಗೆ ಕೋಣ,ಕುರಿ ಕೋಳಿ ಬಲಿಕೊಡುವುದು ವಾಡಿಕೆ ಆದರೆ ಮರಡಿ ದುರುಗಮ್ಮ  ದೇವತೆಗೆ ಕೋಣ,ಕುರಿ ಕೋಳಿಗಿಂತ ಹೋಳಿಗೆ ಹುಗ್ಗಿ ತುಪ್ಪ ನೇ ನೈವೇದ್ಯ ಅದರಿಂದ ಎಲ್ಲಾ ಜನಾಂಗದ ಭಕ್ತಾದಿಗಳು ಈ ದೇವತೆಯನ್ನು ಆರಾಧಿಸುತ್ತಾರೆ.
ತಾಲೂಕಿನ ಮೊರಗೇರಿ ಗ್ರಾಮದಿಂದ  2 ಕಿ.ಮೀ ದೂರದಲ್ಲಿರುವ ಮರಡಿ ದುರುಗಮ್ಮ  ಜಾತ್ರೆ ಮೊನ್ನೆ ಅದ್ದೂರಿಯಾಗಿ ಜರುಗಿತು.ಪ್ರತಿ ವರ್ಷ ಕಾರು ಹುಣ್ಣಿಮೆಯ ನಂತರ ಮಂಗಳವಾರ ಆರಂಭವಾಗುವ ಹಬ್ಬ ವಿಶೇಷವಾಗಿ ಜರುಗುತ್ತದೆ. ಗ್ರಾಮದ ಪ್ರತಿಯೊಂದು ಮನೆಯಲ್ಲಿಯೂ ಬಂಧು-ಬಳಗ  ಎಷ್ಟೇ ದೂರ ಇದ್ದರು ಈ ಹಬ್ಬದ ಸಂದರ್ಭದಲ್ಲಿ ಬಂದು ಸಂಭ್ರಮ ಪಡುತ್ತಾರೆ.ಆರಂಭ ಮಂಗಳವಾರ  ದಿನ ದೇವತೆಗೆ ವಿಶೇಷ ಪೂಜೆ ಅಲಂಕಾರ ಹೋಮ ಮಾಡಿಸುತ್ತಾರೆ. ಮೋರಗೇರಿ ಗ್ರಾಮದಲ್ಲಿ ದೇವಸ್ಥಾನ ಇದೆ. ಇದು ತವರ ಮನೆ. ಮರಡಿಯಲ್ಲಿರುವುದು ಗಂಡನ ಮನೆ ಎಂದು ಹೇಳುತ್ತಾರೆ. ಗ್ರಾಮದಲ್ಲಿ  ಇಡೀ ರಾತ್ರಿ ಊರ ತುಂಬಾ ಪಲಕ್ಕಿಯಲ್ಲಿ  ದೇವತೆಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸುತ್ತಾರೆ ನಂತರ ಬೆಳಗಿನ ಜಾವ 5 ಗಂಟೆಗೆ ಮರಡಿಗೆ ಕರೆದೊಯ್ದು ಪ್ರತಿಷ್ಠಾಪಿಸುತ್ತಾರೆ. ಬುಧವಾರ ಮುಂಜಾನೆಯಿಂದ ಭಕ್ತಾದಿಗಳು ದೀಡು ನಮಸ್ಕಾರ, ವಿಶೇಷ ಪೂಜೆ  ಅಭಿಷೇಕ ಕಾಯಿ ಕರ್ಪೂರ ಹೋಳಿಗೆ ಹುಗ್ಗಿ ಅರ್ಪಿಸಿ ತಮ್ಮ ಹರಕೆಯನ್ನು ತೀರಿಸುತ್ತಾರೆ. ಇಲ್ಲಿ ಯಾವುದೇ ಕೋಳಿ ಕೋಣ ಕುರಿ ಬಲಿಕೊಡುವುದಿಲ್ಲ. ಮಾಂಸಹಾರ ಎಂದರೆ  ಈ ದೇವತೆಗೆ ಆಗಿ ಬರುವುದಿಲ್ಲ. ಒಂದು ಸಾರಿ ಯಾರು ಒಬ್ಬರು ಕುರಿ ಬಲಿ ನೀಡಿದ್ದಕ್ಕೆ  ಅವರ ಕುಟುಂಬ ನಶಿಸಿಹೋಗಿದೆ ಎಂದು ಸಾರ್ವಜನಿಕವಾಗಿ ಕೇಳಿ ಬರುತ್ತದೆ. ಮೋರಿಗೇರಿ ಸೇರಿದಂತೆ ಸುತ್ತ ನಾಲ್ಕಾರು ಗ್ರಾಮಗಳಾದ  ಗೆದ್ದಿಕೇರಿ, ಸಾಲ್ಮುರಳ್ಳಿ, ಸೊನ್ನ, ಸಕ್ರಿಹಳ್ಳಿ, ನಂದಿಪುರ ಬನ್ನಿ ಕಲ್ಲು ಮಹಿಳೆಯರು ಯುವಕರು, ವೃದ್ದರು  ಸೇರಿದಂತೆ ಅನೇಕ ಭಕ್ತರು ಟ್ಯಾಕ್ಟರ್ ಬಂಡಿ, ಕಾರು, ಬೈಕ್ ಮೇಲೆ ಸಾವಿರಾರು ಜನರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಕಿಕ್ಕರಿದ ಜನಸ್ತೋಮದಲ್ಲಿ ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.
ಮೋರಿಗೇರಿ  ಗ್ರಾಮದಲ್ಲಿ ಬುಧವಾರ ಹಳಿಬಂಡಿ ಉತ್ಸವ ನಡೆಸಲಾಗುವುದು. ಎತ್ತುಗಳನ್ನು ಹೂಗಳಿಂದ ಶೃಂಗಾರ ಮಾಡಿ ಊರ ತುಂಬಾ ಮೆರವಣಿಗೆ ಮಾಡುತ್ತಾ ಸಂಭ್ರಮ ಪಡುತ್ತಾರೆ. ಈ ಭಾಗದ  ಮರಡಿ ದುರುಗಮ್ಮನ  ಜಾತ್ರೆ ಒಂದು ವಿಶೇಷ ಎಂದರು ತಪ್ಪಲ್ಲ….