ತಾಂತ್ರಿಕ ಜ್ಞಾನ ಬಳಸಿ ಕೃಷಿ ಕ್ಷೇತ್ರ ಅಭಿವೃದ್ಧಿಗೊಳಿಸಲು ಕರೆ
ಧಾರವಾಡ,ಜೂ28: ಕೃಷಿ ಪದವೀಧರರು ತಮ್ಮ ತಾಂತ್ರಿಕ ಜ್ಞಾನ ಬಳಸಿ ನಾಡಿನ ಸರ್ವತೋಮುಖ ಏಳಿಗೆಗೆ ಶ್ರಮಿಸಬೇಕು ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಕರೆ ನೀಡಿದ್ದಾರೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದ 37 ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕೃಷಿ ಪದವೀಧರರು ಉದ್ಯೋಗ ಅರಸುವ ಬದಲು ಕೆಲಸ ನೀಡುವವರಾಗಿ ಬೆಳೆಯಬೇಕು ಎಂದರು. ಕೃಷಿ ಕ್ಷೇತ್ರದಲ್ಲಿ ಮೂಲ್ಯವರ್ಧನೆ ಹಾಗೂ ಅಭಿವೃದ್ಧಿಗೆ ವ್ಯಾಪಕ ಅವಕಾಶ ಇದೆ. ಕೃಷಿ ಪದವಿಧರರು ತಮ್ಮ ಕೌಶಲ್ಯವನ್ನು ಈ ಕ್ಷೇತ್ರದ ವಿಕಾಸಕ್ಕೆ ಬಳಸಬೇಕು ಎಂದು ಸಲಹೆ ನೀಡಿದರು.
ಧಾರವಾಡದ ಕೃಷಿ ವಿ.ವಿ ಯ 37ನೇ ಘಟಿಕೊತ್ಸವದಲ್ಲಿ 69 ಪಿ.ಹೆಚ್.ಡಿ, 237 ಸ್ನಾತಕೋತ್ತರ ಹಾಗೂ 627 ಸ್ನಾತಕ ಪದವಿ ಸೇರಿದಂತೆ 933 ಅಭ್ಯರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಗಿದೆ. 57 ಚಿನ್ನದ ಪದಕ ಹಾಗೂ 99 ನಗದು ಬಹುಮಾನ ನೀಡಲಾಗಿದೆ. ಈ ಗೌರವಕ್ಕೆ ಪಾತ್ರವಾಗಿರುವ ಎಲ್ಲರಿಗೂ ಅಭಿನಂದನೆಗಳು, ಅಲ್ಲದೆ ಈ ವರ್ಷದ ಧಾರವಾಡ ಕೃಷಿ ವಿವಿ ವಿದ್ಯಾರ್ಥಿನಿ ಕುಮಾರಿ ಸೌಭಾಗ್ಯ ಬೀಳಗಿಮಠ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 101 ನೇ ರಾಂಕ್ ಗಳಿಸಿರುವುದು ರಾಜ್ಯಕ್ಕೆ ಹೆಮ್ಮೆ ತಂದಿದೆ ಎಂದು ಕೃಷಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಧಾರವಾಡ ಕೃಷಿ ವಿ.ವಿ ದೇಶದ ಶ್ರೇಷ್ಠ ವಿಶ್ವವಿದ್ಯಾಲಗಳಲ್ಲಿ ಒಂದಾಗಿದ್ದು, ಹೊಸ ಹೊಸ ಸಂಶೋಧನೆಗಳ ಮೂಲಕ ಕೃಷಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿರುವುದು ಪ್ರಶಂಸನೀಯ ಎಂದು ಚಲುವರಾಯಸ್ವಾಮಿ ಹೇಳಿದರು.
ವಿಶ್ವವಿದ್ಯಾಲಯಗಳು ರೈತರಿಗೆ ಆತ್ಮವಿಶ್ವಾಸ ತುಂಬುವ ಜೊತೆಗೆ ವೈಜ್ಞಾನಿಕ, ತಾಂತ್ರಿಕ ನೆರವು ಒದಗಿಸಬೇಕು ಎಂದು ಅವರು ಸೂಚನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ನವ ದೆಹಲಿಯ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ ಅಧ್ಯಕ್ಷರಾದ ಡಾ. ಸಂಜಯ ಕುಮಾರ ಅವರು ಮಾತನಾಡಿ ಭಾರತ ದೇಶವು 2050 ಕ್ಕೆ 1.7 ಬಿಲಿಯನ್ ಜನಸಂಖ್ಯೆ ಹೊಂದಲಿದ್ದು, ಸದ್ಯದ ಬೇಡಿಕೆಯ ಶೇ 70 ರಷ್ಟು ಕೃಷಿ ಉತ್ಪನ್ನಗಳ ಬೇಡಿಕೆ ಹೆಚ್ಚಲಿದ್ದು ಇದನ್ನು ಎದುರಿಸಲು ಕೃಷಿ ಕ್ಷೇತ್ರದಲ್ಲಿ ಹಲವಾರು ಬದಲಾವಣೆ ತರುವ ಅಗತ್ಯವಿದೆ ದೇಶದ ಖಾದ್ಯ ತೈಲ ಉತ್ಪಾದನೆಯು ಶೇ 40 ರಷ್ಟು ವಾರ್ಷಿಕ ಬೇಡಿಕೆ ಪೂರೈಸಲಿದ್ದು ಶೇ 60 ರಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ.
ಕೃಷಿ ಕ್ಷೇತ್ರ ಕಡಿಮೆಯಾಗುತ್ತಿದ್ದು, ಕೃಷಿ ಉತ್ಪಾದನೆ ಹೆಚ್ಚಳ ಮಾಡುವ ಅಗತ್ಯವಿದೆ. ದೇಶದಲ್ಲಿ ಮುಂಬರುವ ದಿನಗಳಲ್ಲಿ ಹೊಸ ತಂತ್ರಜ್ಞಾನಗಳ ಮೂಲಕ ಜಲ ಕೃಷಿ, ಗಾಳಿ ಕೃಷಿಗೆ ಅಳವಡಿಸಬೇಕಿದೆ. ಸೋಯಾಬಿನ್ ಉತ್ಪಾದನೆಯಲ್ಲಿ ಮಧ್ಯಪ್ರದೇಶ ಪ್ರಥಮ ಸ್ಥಾನದಲ್ಲಿದ್ದು, ಇದಕ್ಕೆ ಜೈವಿಕ, ಸಾವಯವ ಕೃಷಿ ಕಾರಣವಾಗಿದೆ. ಕರ್ನಾಟಕದಲ್ಲಿಯೂ ಸಹ ಸಾವಯವ ಹಾಗೂ ನೈಸರ್ಗಿಕ ಕೃಷಿಗೆ ಒತ್ತು ನೀಡಲಾಗುತ್ತೆದೆ ಎಂದರು.
ಮಣ್ಣಿನ ಗುಣಮಟ್ಟ ಸಂರಕ್ಷಿಸಬೇಕು, ಮಣ್ಣು ತನ್ನ ಸತ್ವ ಕಳೆದುಕೊಂಡರೆ ಉತ್ಪಾದನೆಯನ್ನು ಸಮಸ್ಯೆಯಾಗುತ್ತದೆ. ಕೃಷಿ ಉತ್ಪಾದನೆಯಲ್ಲಿ ಇನ್ನೊಂದು ಹಸಿರು ಕ್ರಾಂತಿಯ ಅಗತ್ಯವಿದ್ದು, ಹೊಸ ತಂತ್ರಜ್ಞಾನಗಳನ್ನು ಬಳಸಿ ಉತ್ಪಾದನೆ ಹೆಚ್ಚಳಗೊಳಿಸಬೇಕೆಂದರು.