ಮಾದಕ ವಸ್ತುಗಳಿಂದ ದೂರವಿರಲು ಕರೆ
ಸಂಜೆವಾಣಿ ವಾರ್ತೆ
ದಾವಣಗೆರೆ; ಜೂ.೨೮ :  ಮಾದಕ ವಸ್ತುಗಳು ನಮ್ಮ ಜೀವನವನ್ನು ಹಾಳು ಮಾಡುವುದಲ್ಲದೇ ನಮ್ಮನ್ನು ದೈಹಿಕ, ಮಾನಸಿಕವಾಗಿ ಹಾಳು ಮಾಡುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ್ ತಿಳಿಸಿದರು.ಜಿಲ್ಲಾ ಕಾರಾಗೃಹ ಇಲಾಖೆಯ ಸಂಭಾಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದಾವಣಗೆರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಮನೋವೈದ್ಯಕೀಯ ವಿಭಾಗ, ಚಿಗಟೇರಿ ಜಿಲ್ಲಾಸ್ಪತ್ರೆ ದಾವಣಗೆರೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ಪೋಲೀಸ್ ಇಲಾಖೆ, ಜಿಲ್ಲಾ ಕಾರಾಗೃಹ ಇಲಾಖೆ, ಹಾಗೂ ವಿವಿಧ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳಸಾಗಣಿಕೆ ವಿರೋಧಿ ದಿನದ ಪ್ರಯುಕ್ತ ಕಾರಾಗೃಹ ನಿವಾಸಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಾನಾಡಿದÀರು. ಇಂದಿನ ಯುವ ಸಮೂಹವು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗು ತ್ತಿರುವುದು, ದುರದೃಷ್ಟಕರ ಸಂಗತಿಯಾಗಿದೆ. ಯುವಕರು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಆಲೋಚನೆ ಮಾಡಬೇಕೆ ಹೊರತು, ದುರಾಲೋಚನೆ ಮಾರ್ಗದಕಡೆ ಗಮನಹರಿಸಬಾರದು. ಈಗಿನ ಕಾಲೇಜಿನ ಯುವಕರು ತಂಬಾಕು, ಸಿಗರೇಟ್, ಇನ್ನಿತರ ಮಾದಕ ವಸ್ತುಗಳನ್ನು ಉಪಯೋಗಿಸುತ್ತಿದ್ದು. ವಿಲಾಸಿ ಜೀವನಕ್ಕೆ ಅವಲಂಭನೆಯಾಗುತ್ತಿದ್ದಾರೆ. ಕೆಲ ಕೀಡಿಗೇಡಿಗಳು ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಯಲ್ಲಿ ಯುವಕರಿಗೆ ಆಸೆ ತೋರಿಸಿ ಯುವಕರನ್ನು ತಪ್ಪುದಾರಿಯತ್ತ ಕರೆದೊಯುತ್ತಿದ್ದಾರೆ. ಮಾದಕ ವ್ಯಸನಕ್ಕೆ ದಾಸರಾದವರು ಪರಿಜ್ಞಾನವಿಲ್ಲದೇ ನಶೆಯಲ್ಲಿಯೇ ಏನಾದರೂ ಅವಘಡಗಳನ್ನು ಮಾಡಿಕೊಂಡು ಕಾರಾಗೃಹಕ್ಕೆ ಬಂದಿರುವವರೇ ಹೆಚ್ಚಾಗಿದೆ. ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವಿಕೆಯಲ್ಲಿ ಯೋಗ, ಧ್ಯಾನದಲ್ಲಿ ನಿರತರಾಗಬೇಕು ಮತ್ತು ಕಾರಾಗೃಹವು ನಿಮಗೆ ಪರಿವರ್ತನಾ ಮಂದಿರವಿದ್ದಂತೆ, ಇಲ್ಲಿ ಬಂದಿರುವ ಎಲ್ಲರೂ ಕೂಡ ತಮ್ಮ ಮನಃಪರಿವರ್ತನೆ ಮಾಡಿಕೊಂಡು ಹೊರಗಡೆ ಹೋದ ನಂತರ ಹೊಸ ಜೀವನವನ್ನು ಪ್ರಾರಂಭಿಸಿ ಎಂದು ಕೀವಿ ಮಾತು ಹೇಳಿದರು.