ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವ
ಬ್ಯಾಡಗಿ,ಜೂ28: ಸಮಾಜದ ಉನ್ನತಿಗಾಗಿ ಶ್ರಮಿಸಿದ ನಾಡಪ್ರಭು ಕೆಂಪೇಗೌಡರು ಇಡೀ ದೇಶವೇ ನಮ್ಮ ಕರ್ನಾಟಕ ರಾಜ್ಯವನ್ನು ಬೆರಗಾಗಿ ನೋಡುವಂತೆ ಮಾಡಿದ ಮಹಾನ್ ಪುರುಷರಾಗಿದ್ದಾರೆ ಎಂದು ತಹಶೀಲ್ದಾರ ಫಿರೋಜಷಾ ಸೋಮನಕಟ್ಟಿ ಶ್ಲಾಘನೆ ವ್ಯಕ್ತಪಡಿಸಿದರು.
ಪಟ್ಟಣದ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಸಭಾಭವನದಲ್ಲಿ ತಾಲೂಕಾಡಳಿತದ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತೋತ್ಸವದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರು ನಗರವನ್ನು ಇಡೀ ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಂಪೇಗೌಡರವರು 14ನೇ ಶತಮಾನದಲ್ಲಿ ನಿರ್ಮಿಸಿಕೊಟ್ಟಿದ್ದಾರೆ. ಅವರ ದೂರ ದೃಷ್ಠಿಯ ಕಲ್ಪನೆಗಳು ಮಹತ್ವವಾಗಿದ್ದು 21ನೇ ಶತಮಾನದಲ್ಲಿಯೂ ನೆನಪಿಸಿಕೊಳ್ಳಲಾಗುತ್ತಿದೆ. ಸುಂದರ ನಗರ ನಿರ್ಮಾಣ, ವ್ಯವಹಾರಿಕ ಕೇಂದ್ರಗಳ ನಿರ್ಮಾಣ, ವಿವಿಧ ಕಸುಬುಗಳಿಗೆ ಪೂರಕವಾಗಿ ಮಾರುಕಟ್ಟೆ ನಿರ್ಮಾಣ, ಕೃಷಿಕರಿಗೆ ಆವಶ್ಯಕವಾದ ಸೌಲಭ್ಯಗಳು, ಕೆರೆ ಉದ್ಯಾನವನ, ದೇವಸ್ಥಾನಗಳ ನಿರ್ಮಾಣವನ್ನು ಸುಮಧುರವಾಗಿ ನಿರ್ಮಿಸಿಕೊಟ್ಟು ಬೆಂಗಳೂರನ್ನು ವಿಶ್ವಕ್ಕೇ ಮಾದರಿ ನಗರವಾಗಿ ನಿರ್ಮಿಸಿಕೊಟ್ಟಿರುವುದು ಸ್ಮರಣೀಯ ಎಂದು ಹೇಳಿದರು.
ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಮಾತನಾಡಿ, ಮಹಾನ್ ವ್ಯಕ್ತಿಗಳ ಜನ್ಮ ದಿನಾಚರಣೆಯ ಮೂಲಕ ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸುವ ಮೂಲಕ ಗೌರವ ನೀಡಬೇಕು. ಜಾತಿ, ಧರ್ಮ ಎನ್ನದೆ ಎಲ್ಲಾ ನಾಯಕರು ಒಂದೇ ಎಂಬ ಭಾವನೆಯಿಂದ ಒಂದು ಸುಂದರ ನಗರ ನಿರ್ಮಾತರಾದ ನಾಡಪ್ರಭು ಕೆಂಪೇಗೌಡರಂತಹ ನಾಯಕರ ಜಯಂತಿ ಆಚರಣೆ ಮಾಡುವುದು ನಮ್ಮ ಪುಣ್ಯ ಎಂದು ಹೇಳಿದರು
ಪ್ರಾಸ್ತಾವಿಕವಾಗಿ ಮಾತನಾಡಿದ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಎನ್.ತಿಮ್ಮಾರೆಡ್ಡಿ ಅವರು, ಕೆಂಪೇಗೌಡರ ಜಯಂತಿ ಆಚರಣೆಯ ಮೂಲಕ ಅವರ ಆದರ್ಶವನ್ನು ತಿಳಿಸಿಕೊಡುವ ಕಾರ್ಯವಾಗುತ್ತಿದೆ. ಅವರ ಕಲ್ಪನೆಯ ನಗರ, ಅವರ ದೂರದೃಷ್ಟಿಯ ಚಿಂತನೆಗಳನ್ನು ಇಂದಿನ ಜನತೆ ಮನಗಾಣುವಂತಾಗಿದೆ ಎಂದರು. ನಾಡಪ್ರಭು ಕೆಂಪೇಗೌಡರ ಬಗ್ಗೆ ಮುಖ್ಯೋಪಾಧ್ಯಾಯ ಜೀವರಾಜ ಛತ್ರದ ಅವರು ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷರುಗಳಾದ ಮುರಿಗೆಪ್ಪ ಶೆಟ್ಟರ. ಫಕ್ಕಿರಮ್ಮ ಚಲುವಾದಿ, ತಾಲೂಕಾ ಕಸಾಪ ಅಧ್ಯಕ್ಷ ಬಿ.ಎಂ.ಜಗಾಪುರ, ಜಾನಪದ ಕಲಾವಿದ ಅಡಿವೆಪ್ಪ ಕುರಿಯವರ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಬಿಇಎಸ್’ಎಂ ಕಾಲೇಜಿನ ಪ್ರಾಚಾರ್ಯ ಜಿ.ಎಸ್ ವೈದ್ಯ, ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಕಡ್ಡಿಪುಡಿ, ನೌಕರರ ಸಂಘದ ತಾಲೂಕಾಧ್ಯಕ್ಷ ಎಂ.ಎಫ್.ಕರಿಯಣ್ಣನವರ ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ನಾಡಪ್ರಭು ಕೆಂಪೇಗೌಡರ ಭಾವಚಿತ್ರದ ಮೆರವಣಿಗೆಯು ಪಟ್ಟಣದಲ್ಲಿ ಸಡಗರದಿಂದ ನಡೆಸಲಾಯಿತು.