ಕೆಂಪೇಗೌಡ ಒಂದು ಜಾತಿಗೆ ಸೀಮಿತ ಅಲ್ಲ
ಹೊಸಕೋಟೆ.ಜೂ.೨೮-ಬೆಂಗಳೂರನ್ನು ನಿರ್ಮಾಣ ಮಾಡಿದ ನಾಡಪ್ರಭು ಕೆಂಪೇಗೌಡರು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು ಎಲ್ಲ ಸಮುದಾಯಕ್ಕೂ ಬೆಂಗಳೂರನ್ನು ನಿಮಿಸಿದವರು ಎಂದು ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಇಟ್ಟಸಂದ್ರ ಸುರೇಶ್ ತಿಳಿಸಿದರು.
ನಗರದ ತಾಲೂಕು ಕಚೇರಿ ವೃತ್ತದ ಬಳಿ ಇರುವ ನಾಡಪ್ರಭು ಕೆಂಪೇಗೌಡರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಬೆಂಗಳೂರಿನ ನಿರ್ಮಾಣ ಮಾಡಿದ ಕೆಂಪೇಗೌಡರು ದೂರ ದೃಷ್ಟಿಯ ವ್ಯಕ್ತಿತ್ವವನ್ನು ಹೊಂದಿದಂತವರಾಗಿದ್ದರು. ಅವರ ದೂರದೃಷ್ಟಿಯ ಪರಿಣಾಮವಾಗಿ ಇಂದು ಬೆಂಗಳೂರಿನಲ್ಲಿ ಕೋಟ್ಯಾಂತರ ಸಂಖ್ಯೆಯ ನಾಗರಿಕರು ನೆಲೆಯೂರಲು ಸಾಧ್ಯವಾಗಿದೆ. ಪ್ರತಿಯೊಂದು ಸಮುದಾಯಕ್ಕೂ ವ್ಯಾಪಾರಕ್ಕಾಗಿ ಮಾರುಕಟ್ಟೆಯನ್ನು ನಿರ್ಮಾಣ ಮಾಡಿ, ಸುಮಾರು ೬೦ಕ್ಕೂ ಹೆಚ್ಚಿನ ಕೆರೆಗಳನ್ನ ಕಟ್ಟಿದ್ದರು, ಅವರು ಅಂದು ಕೆರೆಗಳನ್ನ ಕಟ್ಟದಿದ್ದರೆ ಬೆಂಗಳೂರಿನ ಜನ ನೀರಿಗಾಗಿ ಮತ್ತಷ್ಟು ಪರದಾಡುವ ಸನ್ನಿವೇಶ ಉಂಟಾಗುತ್ತಿತ್ತು. ಆದ್ದರಿಂದ ಕೆಂಪೇಗೌಡರ ಸ್ಮರಣೆ ಮುಂದಿನ ಪೀಳಿಗೆಗೂ ನಿರಂತರವಾಗಿ ಸಾಗಬೇಕು ಎಂದರು.
ನಾಡಪ್ರಭು ಕೆಂಪೇಗೌಡರ ಒಕ್ಕಲಿಗರ ಸಂಘದ ಸಂಘಟನಾ ಕಾರ್ಯದರ್ಶಿ ಬೋಧನಹೊಸಹಳ್ಳಿ ಸೊಣ್ಣೆಗೌಡ ಮಾತನಾಡಿ ಜಗತ್ತಿನೆಲ್ಲಡೆ ಬೆಂಗಳೂರು ಹೆಸರು ಮಾಡಿದೆ ಎಂದರೆ ಅದಕ್ಕೆ ಕಾರಣಕರ್ತರು ಕೆಂಪೇಗೌಡರು. ಕೆಂಪೇಗೌಡರು ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿದರು ಸಹ ಎಂದಿಗೂ ಕೂಡ ಒಂದು ಜಾತಿಗೆ ಸೀಮಿತವಾಗಿ ಕೆಲಸ ಮಾಡಿಲ್ಲ. ಬದಲಾಗಿ ಸರ್ವ ಧರ್ಮಗಳ ಅಭಿವೃದ್ಧಿಗೆ ಮುಖ್ಯ ಭೂಮಿಕೆಯನ್ನು ಹಾಕಿ ಬೆಂಗಳೂರನ್ನು ನಿರ್ಮಿಸಿದರು. ಅವರ ಆದರ್ಶಗಳು ನಮಗೆಲ್ಲ ದಾರಿ ದೀಪವಾಗಿದೆ ಎಂದರು.
ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಉಪಾಧ್ಯಕ್ಷ ರಾಜಶೇಖರ್, ಕಾರ್ಯದರ್ಶಿ ನಾರಾಯಣಸ್ವಾಮಿ, ಖಜಾಂಚಿ ಚಂದ್ರಪ್ಪ, ಸಂಘಟನಾ ಕಾರ್ಯದರ್ಶಿ ಸೊಣ್ಣೆಗೌಡ, ಬೈರೇಗೌಡ, ಮಣಿ, ಬಸವರಾಜ್, ಮುನಿಶಾಮಣ್ಣ, ನಾಗೇಶ್, ಮುಖಂಡರಾದ ವೈಎಸ್‌ಎಂ ಮಂಜುನಾಥಗೌಡ, ಸೂರಿ, ರಘು ಸೇರಿದಂತೆ ಸಮುದಾಯದ ಹಲವಾರು ಮುಖಂಡರು ಹಾಜರಿದ್ದರು.