ರಾಜ್ಯ ರಾಜ್ಯಧಾನಿ ಬೆಳವಣಿಗೆಗೆ ಕಾರಣೀಭೂತರು ನಾಡಪ್ರಭು ಕೆಂಪೇಗೌಡರು
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೨೮; ರಾಜ್ಯ ರಾಜಧಾನಿ ಬೆಂಗಳೂರು ಕಟ್ಟಿದ ಕೀರ್ತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಬೆಳವಣಿಗೆಗೆ ಕಾರಣೀಭೂತರಾದವರು ನಾಡಪ್ರಭು ಕೆಂಪೇಗೌಡರು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಬಣ್ಣಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಸಮಾರಂಭದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.ಸರ್ಕಾರದ ವತಿಯಿಂದ 2017ರ ಜೂನ್ 27ರಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ನಾಡಿನಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ರಾಜ್ಯದ ರಾಜಧಾನಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು. ಇವರ ಪ್ರಭುತ್ವ ಹಾಗೂ ದೂರದೃಷ್ಟಿಯ ಯೋಜನೆಗಳಿಂದಾಗಿ ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಇಂದು  ದೊಡ್ಡಮಟ್ಟದಲ್ಲಿ ಬೆಳೆದಿದೆ ಎಂದು ಹೇಳಿದರು.ರಾಜ್ಯದಲ್ಲಿ ತುಂಬಾ ಶ್ರೀಮಂತವಾಗಿ ಆಳ್ವಿಕೆ ಮಾಡಿದ ರಾಜಮನೆತನಗಳಲ್ಲಿ ಮೈಸೂರು ಒಡೆಯರು ಹಾಗೂ ವಿಜಯನಗರ ಸಂಸ್ಥಾನದವರು ಪ್ರಮುಖರು. ವಿಜಯನಗರ ಕೃಷ್ಣದೇವರಾಯರ ನಂತರ ಅವರ ಸಹೋದರ ಅಚ್ಯುತರಾಯ ಆಳ್ವಿಕೆಗೆ ಬಂದಾಗ ಸ್ಥಳೀಯ ಆಡಳಿತ ಸುಧಾರಣೆಗಾಗಿ ಅಚ್ಯುತರಾಯರು, 12 ಹೋಬಳಿಗಳಿಗಳನ್ನು ಒಳಗೊಂಡ ಹಳೆಯ ಬೆಂಗಳೂರನ್ನು 50 ಸಾವಿರ ವರಹಗಳಿಗೆ ಹಿರಿಯ ಕೆಂಪೇಗೌಡರಿಗೆ ಕೊಡುತ್ತಾರೆ. ಅಂದಿನ ಆಡಳಿತ ವ್ಯವಸ್ಥೆಯಲ್ಲಿ ಕೇವಲ 30 ಪಗೋಡಗಳು ಆದಾಯ ಲಭಿಸುತ್ತಿತ್ತು. ಅಂತಹ ಸಂದರ್ಭದಲ್ಲಿ ಹಳೆಯ ಬೆಂಗಳೂರನ್ನು ಆಡಳಿತದ ವಶಕ್ಕೆ ಪಡೆದು ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣವಾಗಿ ಕಾವಲು ಗೋಪುರ ನಿರ್ಮಾಣ ಮಾಡಿ,  ಕೋಟೆ ಕೊತ್ತಲುಗಳು, ಕೆರೆ ಕಟ್ಟೆಗಳನ್ನು ನಿರ್ಮಿಸಿದ್ದಾರೆ. ಬೃಹತ್ ಬೆಂಗಳೂರು ಬೆಳವಣಿಗೆಗೆ ನಾಡಪ್ರಭು ಕೆಂಪೇಗೌಡರು ಕಾರಣರಾಗಿದ್ದಾರೆ ಎಂದು ಹೇಳಿದರು.ನಿವೃತ್ತ ಪ್ರಾಂಶುಪಾಲ ಮೀರಸಾಬಿಹಳ್ಳಿ ಡಾ.ಸಿ.ಶಿವಲಿಂಗಪ್ಪ  ಮಾತನಾಡಿ,  16ನೇ ಶತಮಾನದ ಅತ್ಯುನ್ನತ ಮಾದರಿಯ ಯೋಜನಾಬದ್ಧ ಶೈಲಿ ನಗರವಾಗಿ ವಿಸ್ತರಣೆ ಮಾಡಿದ ಬೆಂಗಳೂರು ನಗರ ಸಂಸ್ಥಾಪಕ ಕೆಂಪೇಗೌಡರು. ನಾಡು ಮತ್ತು ಜನರ ಹಿತರಕ್ಷಣೆಗಾಗಿ ಕೋಟೆ ಮತ್ತು ಗುಡಿಗೋಪುರಗಳ ನಿರ್ಮಾಣದ ಜೊತೆಗೆ ನಗರ ಹಾಗೂ ಕೃಷಿ ನೀರಿನ ಸಂಪನ್ಮೂಲ ವ್ಯವಸ್ಥೆ ಮತ್ತು ವಾಣಿಜ್ಯ ನಗರವಾಗಿ ಅಭಿವೃದ್ಧಿ ಮಾಡುತ್ತಾ, ರಕ್ಷಣೆ ಮತ್ತು ಆಡಳಿತ ವ್ಯವಸ್ಥೆಯಿಂದ ಇಡೀ ನಾಡು ಶಾಂತಿ ಮತ್ತು ಸುಭೀಕ್ಷವಾಗಿರುವಂತೆ ಆಳ್ವಿಕೆ ಮಾಡಿ, ಜನಹಿತ ಕಾರ್ಯಗಳಿಂದ ಲೋಕ ಪ್ರಸಿದ್ದಿಯಾದ ಮಾನವತಾವಾದಿ ನಾಡಪ್ರಭು ಕೆಂಪೇಗೌಡ ಅಜರಾಮರವಾಗಿದ್ದಾರೆ. ಕೆಂಪೇಗೌಡರ ಆತ್ಮಸ್ಥೈರ್ಯ, ಪರಿಶ್ರಮ, ಬದ್ಧತೆ, ನೈತಿಕತೆ, ಸ್ವಾಭಿಮಾನ, ಜನಹಿತ ಇಚ್ಚಾಶಕ್ತಿ, ಅನುಪಮ ವ್ಯಕ್ತಿತ್ವ, ನಾಯಕತ್ವದ ಒಳನೋಟಗಳು ಈಗಿನ ಜನಪ್ರತಿನಿಧಿಗಳಿಗೆ ಮತ್ತು ಆಡಳಿತಗಾರರಿಗೆ ಪ್ರೇರಕಶಕ್ತಿಯಾಗಿ ಮಾದರಿಯಾಗಬೇಕಿದೆ. ವರ್ತಮಾನ ಬದುಕಿನ ಒಳಿತಿಗಾಗಿ ಮತ್ತು ಭವಿಷ್ಯತ್ತಿನ ಸುಭದ್ರತೆಗಾಗಿ ಚರಿತ್ರೆಯೊಂದಿಗೆ ನಾವೆಲ್ಲರೂ ಮುಖಾಮುಖಿಯಾಗಬೇಕಿದೆ ಎಂದು ಹೇಳಿದರು.