ಜಿಲ್ಲಾಡಳಿತದಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ
ಚಿಕ್ಕಬಳ್ಳಾಪುರ, ಜೂ.೨೮- ನಾಡಪ್ರಭು ಕೆಂಪೇಗೌಡರು ೧೬ ನೇ ಶತಮಾನದಲ್ಲಿ ಕಂಡಿದ್ದ ದೂರದೃಷ್ಟಿಯ ಕನಸ್ಸಿನ ಫಲವೇ ಇಂದಿನ ೧.೪೦ ಕೋಟಿ ಜನರು ವಾಸಿಸುತ್ತಿರುವ ಬೃಹತ್ ಬೆಂಗಳೂರು ನಗರ ನಿರ್ಮಾಣಕ್ಕೆ ಕಾರಣ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಅವರು ತಿಳಿಸಿದರು.
ಗುರುವಾರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಒಕ್ಕಲಿಗರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ “ಶ್ರೀ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿ”ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಸಮುದಾಯಗಳ ವೃತ್ತಿಗಳಿಗೆ ಮತ್ತು ಅವರ ವ್ಯಾಪಾರ ವಹಿವಾಟುಗಳಿಗೆ ಅನುಕೂಲವಾಗುವ ದೂರದೃಷ್ಟಿಯಿಂದ ಬೆಂಗಳೂರು ನಗರದಲ್ಲಿ ೫೦೦ ವರ್ಷಗಳ ಹಿಂದೆಯೇ ಪೇಟೆಗಳನ್ನು ನಿರ್ಮಾಣ ಮಾಡಿ ಸುಸಜ್ಜಿತ ನಗರವನ್ನು ಕೆಂಪೇಗೌಡರು ನಿರ್ಮಾಣ ಮಾಡಿದ್ದರು. ಒಂದು ನಗರದ ಭವಿಷ್ಯತ್ತಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ಜಲ ಸಂರಕ್ಷಣೆಯ ಮೂಲಗಳಾದ ಕೆರೆ, ಕುಂಟೆಗಳು ಕಲ್ಯಾಣಿಗಳನ್ನು ನಿರ್ಮಿಸಿ ದೂರ ದೃಷ್ಟಿಯ ಕನಸನ್ನು ಕಂಡಿದ್ದರು. ಆದರೆ ಕೆಂಪೇಗೌಡರ ನಂತರದ ಪೀಳಿಗೆಯವರು, ಇಂದಿನ ಪೀಳಿಗೆಯವರು ಅವುಗಳನ್ನು ಉಳಿಸಿ ಅಭಿವೃದ್ಧಿ ಪಡಿಸುವ ಬದಲು ಕೆರೆಗಳನ್ನು ಬಸ್ ನಿಲ್ದಾಣಗಳನ್ನಾಗಿ ಮತ್ತು ಬಡವಣೆಗಳನ್ನಾಗಿ ನಿರ್ಮಿಸಿ ಕಾಂಕ್ರೀಟ್ ಮಯಗೊಳಿಸಿದ್ದೆವೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಗತಿಪರ ಚಿಂತಕರಾದ ಮಳ್ಳೂರು ಶಿವಣ್ಣ ಅವರು ಶ್ರೀ ಕೆಂಪೇಗೌಡ ಜೀವನ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಸಾಧಕ ರೈತರಾದ ಎ. ರಾಮಚಂದ್ರರೆಡ್ಡಿ, ವೀಣಾ.ವಿ, ವೈ.ಎನ್. ಶ್ರೀನಿವಾಸರೆಡ್ಡಿ, ರವಿಚಂದ್ರರೆಡ್ಡಿ, ಕಾಮರೆಡ್ಡಿ, ಸತೀಶ್, ಎ.ಸಿ.ಶಿವಾರೆಡ್ಡಿ, ರಾಧಮ್ಮ, ಡಿ.ನರಸಿಂಹರೆಡ್ಡಿ, ದೊಡ್ಡವೆಂಕಟರೆಡ್ಡಿ, ದೇವೀರಪ್ಪ ಹಾಗೂ ವೈ.ವೆಂಕಟೇಶ ರವರಿಗೆ ಸನ್ಮಾನಿಸಲಾಯಿತು. ಇದೇವೇಳೆ ಪ್ರತಿಭಾವಂತ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ. ಭಾಸ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮನಿಷಾ, ತಹಶೀಲ್ದಾದರ್ ಅನಿಲ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಯಲುವಹಳ್ಳಿ ಎನ್.ರಮೇಶ್, ಡಾ. ಶ್ರೀನಿವಾಸ್ ಮೂರ್ತಿ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಪಿ.ಎನ್ ಕೇಶವ ರೆಡ್ಡಿ, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್ ಕೇಶವರೆಡ್ಡಿ, ಸಮುದಾಯ ಮುಖಂಡರಾದ ನಾಗರಾಜು, ಗಜೇಂದ್ರ, ನಾರಯಣಸ್ವಾಮಿ, ಪ್ರಕಾಶ್ ಎಂ, ಗೋಪಾಲಗೌಡ ಕಲ್ವಮಂಜಲಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಸಚಿವರು ನಗರದ ಎಂ.ಜಿ ರಸ್ತೆಯಲ್ಲಿರುವ ಶ್ರೀ ಮರಳಸಿದ್ದೇಶ್ವರ ದೇವಸ್ಥಾನದ ಮುಂಭಾಗದಿಂದ ಶ್ರೀ ಕೆಂಪೇಗೌಡರ ಪಲ್ಲಕ್ಕಿ ಮತ್ತು ಜಾನಪದ ಕಲಾತಂಡದ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಎಂ.ಜಿ ರಸ್ತೆ ಮತ್ತು ಬಿ.ಬಿ ರಸ್ತೆ ಮುಖಾಂತರ ವೇದಿಕೆ ಕಾರ್ಯಕ್ರಮದ ಒಕ್ಕಲಿಗರ ಕಲ್ಯಾಣ ಮಂಟಪದವರೆಗೂ ಅದ್ದೂರಿಯಾಗಿ ಸಾಗಿತು. ಡೊಳ್ಳು ಕುಣಿತ, ಸೋಮನ ಕುಣಿತ, ವೀರಗಾಸೆ, ಮಹಿಳಾ ಮಣಿಗಳ ಪೂರ್ಣಕುಂಭ, ಆರತಿ ಹಾಗೂ ವಿದ್ಯಾರ್ಥಿಗಳ ಬ್ಯಾಂಡ್ ಪ್ರದರ್ಶನಗಳು ಜನರ ಮೆಚ್ಚುಗೆಗೆ ಪಾತ್ರವಾದವು. ಮೆರವಣಿಗೆಯು ಕಲ್ಯಾಣ ಮಂಟಪಕ್ಕೆ ತಲಿಪಿದ ವೇಳೆ ಸಚಿವರು ಶ್ರೀ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು.