ಸರ್ಕಾರದ ಯೋಜನೆಗಳನ್ನು ಸ್ವಯಂ ಸೇವಾ ಸಂಸ್ಥೆಗಳು ಜನಸಾಮಾನ್ಯರಿಗೆ ತಲುಪಿಸುವ ಕಾಯಕ ಮಾಡಿ
ಸಂಜೆವಾಣಿ ವಾರ್ತೆ
ಮಂಡ್ಯ: ಜೂ.28:- ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾಯಕ ಪ್ರಾಮಾಣಿಕವಾಗಿ ಸ್ವಯಂ ಸೇವಾ ಸಂಸ್ಥೆಗಳು ನೆರವೇರಿಸಬೇಕಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.
ಭಾರತ ಸರ್ಕಾರದ ದತ್ತೋಪಂತ್ ತೆಂಗಡಿ, ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿ, ಪರಿಸರ ರೂರಲ್ ಡವಲಪ್‍ಮೆಂಟ್ ಸೊಸೈಟಿ, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ವತಿಯಿಂದ ನಡೆದ ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಗಳ ಮೂರು ದಿನಗಳ ಜಾಗೃತಿ ಮತ್ತು ನೋಂದಣಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಮಂದಿ ತೊಡಗಿರುವ ಜಿಲ್ಲೆಯ ರೈತ ಬಂಧುಗಳಿಗೆ ಗ್ರಾಮದಲ್ಲಿಯೇ ಸರ್ಕಾರದ ವಿವಿಧ ಯೋಜನೆಗಳನ್ನು ತಲುಪಿಸುವ ಕಾಯಕ ತುಂಬಾ ಉತ್ತಮವಾಗಿದೆ.ಪ್ರಸಕ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸುವ ಕರ್ಯಕ್ರಮಗಳನ್ನು ಸಮುದಾಯದ ಕಟ್ಟ ಕಡೆಯ ಪ್ರಜೆಗೂ ತಲುಪಿಸುವಂತಾಗಲು ಹಲವಾರು ಮಾರ್ಗೋಪಾಯಗಳನ್ನು ನೀಡಿದೆ.ಗ್ರಾಮಗಳಲ್ಲಿನ ಸಿಎಸ್‍ಸಿ, ಗ್ರಾಮ ಒನ್ ಸೇರಿದಂತೆ ಇತರೆ ಸಂಸ್ಥೆಗಳು ಕಾರ್ಯನಿರ್ವಹಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.
5 ಎಕರೆಗಿಂತ ಕಡಿಮೆ ಇರುವ ಮಂದಿಯೇ ಹೆಚ್ಚಿದ್ದು, 5 ಎಕರೆ ಮೀರಿದ ಜನರ ಸಂಖ್ಯೆ ಕಡಿಮೆ ಇದೆ. ತುಂಡು ಭೂಮಿಗಳಲ್ಲಿ ಆದಾಯೋತ್ಪನ್ನ ಚಟುವಟಿಕೆಗಳನ್ನು ಮಾಡುತ್ತಾ, ಜೀವನ ಮಟ್ಟದ ಸುಧಾರಿಸುತ್ತಿರುವ ಇವರ ಜೀವನ ಶೋಚನೀಯ ಸ್ಥಿತಿಯಲ್ಲಿದೆ. ಸ್ವಾವಲಂಭಿ ಜೀವನವನ್ನು ಸಾಗಿಸುವಂತಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇವರನ್ನು ಗಮನದಲ್ಲಿಟ್ಟು ರೂಪಿಸುವ ಯೋಜನೆಗಳನ್ನು ತಲುಪಿಸುವಂತಹ ಕಾರ್ಯವನ್ನು ಪಾರದರ್ಶಕವಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಇಶ್ರಮ್, ಸಂಧ್ಯಾ ಸುರಕ್ಷಾ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಶ್ರಮಿಕ್ ಕಾರ್ಡ್, ಆಯಿಷ್ಮಾನ್ ಭಾರತ್ ಕಾರ್ಡ್ ವಿತರಣೆ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಈ ಶಿಬಿರದಿಂದ ಯಶಸ್ಸು ಸಿಗುವಂತಾಗಬೇಕು ಎಂದು ಹೇಳಿದರು.
ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ. ಯೋಗೀಶ್ ಮಾತನಾಡಿ, ಎಪಿಜೆ ಅಬ್ದುಲ್ ಕಲಾಂ ಅವರ ಗ್ರಾಮೀಣ ಪುರ ಯೋಜನೆಯು ನಗರ ಪ್ರದೇಶದ ಸಕಲ ಸವಲತ್ತುಗಳನ್ನು ಹೊಂದವ ಹಾಗೆ ಸ್ವಾವಲಂಭಿಯನ್ನು ಕಾಪಾಡಲು ಕರ್ನಾಟಕ ಚುನಾಯಿತ ಪ್ರತಿನಿಧಿಗಳು ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಅವರ ಸಲಹೆಯಂತೆ ಪ್ರತೀ ಗ್ರಾಮಗಳಲ್ಲೂ ಕೂಡ ಶಿಕ್ಷಣ, ಆರೋಗ್ಯ, ಅಭಿವೃದ್ಧಿಯ ದೃಷ್ಠಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಪರಿಚಯಿಸಿ ಅನುಷ್ಠಾನಗೊಳಿಸಲು ಉಚಿತವಾಗಿ ಈ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವೃಂದ, ರಾಷ್ಟ್ರೀಯ ಕಾರ್ಮಿಕರ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿಯ ಶಿಕ್ಷಣಾಧಿಕಾರಿ ಸತೀಶ್‍ಕುಮಾರ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‍ನ ಅರುಣ್‍ಕುಮಾರ್, ಜಿಲ್ಲಾ ಉದ್ಯೋಗಾಧಿಕಾರಿ ಕನ್ನಯ್ಯಕುಮಾರ್, ಪರಿಸರ ಸಂಸ್ಥೆ ಕಾರ್ಯದರ್ಶಿ ಕೆ.ಪಿ.ಅರುಣಕುಮಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣೇಗೌಡ, ಗ್ರಾ.ಪಂ. ಸದಸ್ಯರಾದ ನವೀನ್, ಶಿವಣ್ಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ವಿ.ಶಂಕರ್ ಸೇರಿದಂತೆ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.