ಶಿಕ್ಷಣವೇ ಮಕ್ಕಳ ಭವಿಷ್ಯವನ್ನು ಉಜ್ಜಲವಾಗಿಸುವುದು; ಬಸವಪ್ರಭು ಶ್ರೀ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.28; ಮೌಲಾನ ಆಜಾದ್ ಸಂಸ್ಥೆ, ದಾವಣಗೆರೆ ಅಧ್ಯಕ್ಷರಾದಂತಹ ಡಾ. ಸಿ.ಆರ್.ನಸೀರ್ ಅಹಮದ್ ಅವರು ಜಿಲ್ಲೆಯ ಸರ್ಕಾರಿ ಮತ್ತು ಅನೇಕ ಶಾಲೆಗಳ ವಿದ್ಯಾರ್ಥಿಗಳಿಗೆ, ನೋಟ್‌ಬುಕ್, ಪೆನ್ ಹಾಗೂ ಇತರೆ ಶಿಕ್ಷಣ ಸಾಮಾಗ್ರಿಗಳನ್ನು ವಿತರಣೆ ಮಾಡಿದರು.ಈ ಕಾರ್ಯಕ್ರಮಕ್ಕೆ ಶ್ರೀ ಬಸವಪ್ರಭು ಸ್ವಾಮೀಜಿ ಚಾಲನೆ ನೀಡಿ ಮಾತನಾಡಿ ಕರ್ನಾಟಕ ರಾಜ್ಯ ಹಾಗೂ ನಮ್ಮ ದೇಶದ ಅಭಿವೃದ್ದಿಯಾಗಬೇಕಾದರೆ ಮಕ್ಕಳಿಗೆ ಉಜ್ಜಲ ಭವಿಷ್ಯದ ಜೊತೆಗೆ ಉತ್ತಮ ಸಂಸ್ಕಾರ ದೊರೆಯಬೇಕಾದಲ್ಲಿ ಶಿಕ್ಷಣ ಅವಶ್ಯವಾಗಿದೆ. ಮಕ್ಕಳಿಗೆ ವಿಶೇಷವಾಗಿ ನುಡಿಯುತ್ತಾ ತಾವು ತಮ್ಮ ಸ್ವಂತ ಕಾಲಿನ ಮೇಲೆ ನಿಂತ ನಂತರ ತಮ್ಮ ಪೋಷಕರನ್ನು ಯಾವುದೇ ಕಾರಣಕ್ಕೂ ವೃದ್ಧಾಶ್ರಮಕ್ಕೆ ಕಳುಹಿಸಿದೇ ಅವರ ತಮ್ಮ ಬಳಿಯೇ ಇರಿಸಿ ಅವರ ಸೇವೆಯನ್ನು ಮಾಡಬೇಕೆಂದು ಸೂಚಿಸಿದರು. ಸಂಸ್ಥೆಯ ಅಧ್ಯಕ್ಷರು ಹಾಗೂ  ವಿರಕ್ತಮಠದ ಸದಸ್ಯರಾದ ಡಾ. ಸಿ.ಆರ್.ನಸೀರ್ ಅಹಮದ್  ಸಮಾಜ ಸೇವೆಯೊಂದಿಗೆ ಶಿಕ್ಷಣ ಪ್ರೇಮಿಗಳಾಗಿರುತ್ತಾರೆ. ಸುಮಾರು ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ಮಕ್ಕಳಿಗೋಸ್ಕರ ನಡೆಸಿಕೊಂಡು ಬಂದಿರುತ್ತಾರೆ. ನನಗೆ ಸಂಪೂರ್ಣ ವಿಶ್ವಾಸವಿದೆ ಇವರು ತಮ್ಮ ಕೊನೆ ಉಸಿರಿರುವವರೆಗೂ ಈ ಸೇವೆಯನ್ನು ಅವರು ಮಾಡುತ್ತಾರೆ. ಇಂತಹ ಬೇರುಮಟ್ಟದ ಸೇವೆಗಳನ್ನು ನಿರ್ವಹಿಸುತ್ತಿರುವವರಗೆ ರಾಷ್ಟçಮಟ್ಟದಲ್ಲಿ ಗುರುತಿಸಿ ಕೇಂದ್ರಸರ್ಕಾರದ ಪ್ರಶಸ್ತಿಯನ್ನು ನೀಡಬೇಕಾಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಈ ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲೆಯ ಬಿ.ಜೆ.ಪಿ. ಪಕ್ಷದ ಅಧ್ಯಕ್ಷರಾದಂತಹ ಶ್ರೀ ಎನ್.ರಾಜಶೇಖರ್, ಜಿಲ್ಲಾ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕಡ್ಲೆಬಾಳು ಧನಂಜಯ, ಜಾಮಿಯಾ ಮಸೀದಿಯ ಪದಾಧಿಕಾರಿಗಳಾದ ಶ್ರೀ ಅಲ್ಲಾವಲಿ ಭಕ್ಷೀಖಾನ್‌ರವರು ಮಕ್ಕಳನ್ನು ಉದ್ದೇಶಿಸಿ ತಮ್ಮ ಭಾಷಣಗಳಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದು ಭಾರತ ದೇಶದ ಉತ್ತಮ ಪ್ರಜೆಗಳಾಗಬೇಕೆಂದು ಸಲಹೆ ನೀಡಿದರು. ಹಾಗೂ ವಿವಿಧ ಕ್ಷೇತ್ರದಲ್ಲಿ ನಿರತರಾಗಿರುವ ಸಂಘ ಸಂಸ್ಥೆಗಳೂ ಸಹ ಇಂತಹ ಕಾರ್ಯಕ್ರಮಗಳನ್ನು ನಡೆಸಬೇಕೆಂದು ತಿಳಿಸಿದರು.