ಹಸ್ತಾಂತರವಾದ ಬಡಾವಣೆಗಳಿಗೂ ತೆರಿಗೆ ಸಂಗ್ರಹ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.28:- ಮುಡಾದಿಂದ ಅನುಮೋದನೆಗೊಂಡ ಬಡಾವಣೆಗಳು ನಗರಪಾಲಿಕೆಗೆ ಹಸ್ತಾಂತರವಾದ ಮೇಲೆ ಖಾತೆ ಮಾಡಿಕೊಡುವುದು ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ಹೊಣೆ ಹೊತ್ತಿದೆ. ಪಾಲಿಕೆಗೆ ಹಸ್ತಾಂತರವಾದ ಮೇಲೂ ನಿವಾಸಿಗಳಿಂದ ಮುಡಾ ತೆರಿಗೆ ಸಂಗ್ರಹ ಮಾಡುತ್ತಿದೆ. ಈ ಬಗ್ಗೆ ಮತ್ತೊಮ್ಮೆ ಮುಡಾಗೆ ಪತ್ರ ಬರೆಯುವುದಕ್ಕೆ ತೀರ್ಮಾನ ಮಾಡಲಾಗಿದೆ.
ನಗರಪಾಲಿಕೆಯ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಗುರುವಾರ ಶಾಸಕ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ನಗರಪಾಲಿಕೆ ವ್ಯಾಪ್ತಿಗೆ ಸಂಬಂಧಿಸಿದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಡಾದಿಂದ ಪಾಲಿಕೆಗೆ ಹಸ್ತಾಂತರವಾದರೂ ತೆರಿಗೆ ಪಾವತಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿ ಮುಡಾಗೆ ಸೂಚನೆ ನೀಡಿದ್ದರೂ ತೆರಿಗೆ ಪಾವತಿ ಮಾಡಿಸಿಕೊಳ್ಳುತ್ತಿದೆ ಎಂದು ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್ ಹೇಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.
ಮುನ್ಸಿಪಾಲಿಟಿ ಆಕ್ಟ್ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳೇ ತೆರಿಗೆ ಪಾವತಿಸಿಕೊಳ್ಳಬೇಕು. ಹೀಗಿದ್ದರೂ, ಮುಡಾ ಕಂದಾಯ ಕಟ್ಟಿಸಿಕೊಳ್ಳುತ್ತಿದೆ ಎಂದು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡ, ಮುಡಾಗೆ ಮತ್ತೊಮ್ಮೆ ಪತ್ರ ಬರೆದು ಕಂದಾಯ ಪಾವತಿಸಿಕೊಳ್ಳದೆ ಪಾಲಿಕೆಗೆ ಕಳುಹಿಸಬೇಕು ಎಂದು ಸೂಚಿಸಬೇಕು ಎಂದರು.
ವಿಜಯನಗರ ಮೂರನೇ ಹಂತದಲ್ಲಿ ಯುಜಿಡಿ ಸಮಸ್ಯೆ, ಪಾರ್ಕ್‍ಗಳ ನಿರ್ವಹಣೆ ಸಮರ್ಪಕವಾಗದೆ ಇರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಶಾಸಕರು, ವಾರ್ಡುವಾರು ಪಾರ್ಕ್‍ಗಳ ನಿರ್ವಹಣೆಗೆ ಸಂಗ್ರಹಿಸುತ್ತಿರುವ ಅಂದಾಜನ್ನು ನೋಡಿ ನಿರ್ವಹಣೆಗೆ ಬಳಸಬೇಕು. ಯುಜಿಡಿ ಸಮಸ್ಯೆ ಬಗ್ಗೆ ದೂರು ಬರುತ್ತಿದ್ದಂತೆ ಪರಿಹರಿಸಬೇಕು. ಯುಜಿಡಿ ನೀರು ಹರಿದರೆ ಸೊಳ್ಳೆಗಳ ಕಾಟ, ಡೆಂಘೀ ಜ್ವರ ಬರಲಿದೆ. ಹಿನಕಲ್‍ನಿಂದ ನನ್ನೇಶ್ವರ ಕಲ್ಯಾಣಿ ಕೆರೆಗೆ ಸೇರುವ ಮಾರ್ಗದ ಯುಜಿಡಿ ಲೈನ್ ಬದಲಿಸಲು ಗಮನಹರಿಸಬೇಕು ಎಂದು ತಾಕೀತು ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಭಿವೃದ್ಧಿ ಅಧಿಕಾರಿ ಸೋಮಶೇಖರ್, ಹುಣಸೂರು ರಸ್ತೆಯ ರೂಸ್ಟ್ ಹೋಟೆಲ್‍ನಿಂದ ರಾಯಲ್ ಎನ್‍ಫೀಲ್ಡ್, ರುಡ್‍ಸೆಟ್‍ನಿಂದ ನನ್ನೇಶ್ವರ ಕಲ್ಯಾಣಿವರೆಗೆ ಯುಜಿಡಿ ಪ್ರತ್ಯೇಕ ಮಾರ್ಗಕ್ಕೆ ಟೆಂಡರ್ ಪ್ರಕ್ರಿಯೆ ಶುರು ಮಾಡಲಾಗಿದೆ ಎಂದು ವಿವರಿಸಿದರು.
ಪಾರ್ಕ್ ನಿರ್ವಹಣೆ ಬಗ್ಗೆ ತೋಟಗಾರಿಕೆ ವಿಭಾಗದ ಸಹಾಯಕ ನಿರ್ದೇಶಕ ಮೋಹನ್ ವಿವರಣೆ ನೀಡಿ, ವಿಜಯನಗರ ಮೂರನೇ ಹಂತದಲ್ಲಿ 14 ಪಾರ್ಕ್‍ಗಳಿದ್ದು, ಮೂರು ನಿರ್ವಹಣೆ ಮಾಡುತ್ತಿದ್ದು, ಹನ್ನೊಂದು ನಿರ್ವಹಣೆಯಾಗುತ್ತಿಲ್ಲ ಎಂದರು. ಈ ವೇಳೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್, ನಗರದಲ್ಲಿ 529 ಉದ್ಯಾನಗಳಿದ್ದು, 312 ಉದ್ಯಾನಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಉಳಿದವನ್ನು ನಿರ್ವಹಣೆ ಮಾಡಲು ವಲಯವಾರು ಟೆಂಡರ್ ಕರೆಯಲಾಗುವುದು ಎಂದು ಶಾಸಕರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ವಲಯವಾರು ಬದಲಿಗೆ ವಾರ್ಡುವಾರು ಕರೆಯಬೇಕು. ಯಾವ ವಾರ್ಡಿನಲ್ಲಿ ಎಷ್ಟು ತೆರಿಗೆ ಸಂಗ್ರಹವಾಗುತ್ತಿದೆ. ನಿರ್ವಹಣೆಗೆ ಎಷ್ಟು ಖರ್ಚಾಗುತ್ತದೆ ಎನ್ನುವುದರ ಅಂದಾಜು ತಯಾರಿಸಿ ಟೆಂಡರ್ ಕರೆಯುವಂತೆ ಹೇಳಿದರು. ಈ ವೇಳೆ ವಿಜಯನಗರ ಮೂರನೇ ಹಂತದ ಬಗ್ಗೆ ಪಾಲಿಕೆಗೆ ಹಸ್ತಾಂತರವಾದರೂ ಸರ್ಕಾರದಿಂದ ರಾಜ್ಯಪತ್ರದಲ್ಲಿ ಹೊರಡಿಸಿಲ್ಲ. ಸ್ಥಳೀಯವಾಗಿ ಹೊಂದಾಣಿಕೆ ಮಾಡಿಕೊಂಡು ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ವಾರ್ಡುಗಳಿಗೆ ಭೇಟಿ ಕೊಡಿ: ಮುಡಾ ಆಯುಕ್ತರು ಒಳ್ಳೆ ಅಧಿಕಾರಿ. ಅವರ ಒಳ್ಳೆತನ ದುರುಪಯೋಗಪಡಿಸಿಕೊಳ್ಳಬಾರದು. ಹೊಂಗಳ್ಳಿ, ಮೇಗಳಾಪುರ, ಕಬಿನಿ ಯೋಜನೆಯಿಂದ 60 ಎಂಎಲ್‍ಡಿ ಕುಡಿಯುವ ನೀರು ಬರುತ್ತಿದೆ. ನಗರದ ಜನಸಂಖ್ಯೆಗೆ ಹೆಚ್ಚಿನ ನೀರು ಒದಗಿಸಲು ಉಂಡುವಾಡಿ ಯೋಜನೆ ಪ್ರಸ್ತಾಪ ಮಾಡಿದಾಗ ಅಧಿಕಾರಿಗಳು ಸುಮ್ಮನಾಗಿದ್ದರು. ನಂತರ, ಮೈಸೂರು ನಗರದ ಹಳೆಯ ಪ್ರದೇಶ ಪರಿಗಣಿಸದೆ ಹೊರವಲಯದ ಮತ್ತು ಹಳ್ಳಿಗಳನ್ನು ಸೇರಿಸಿ 545 ಕೋಟಿ ರೂ. ಯೋಜನೆಗೆ ಮಂಜೂರು ಮಾಡುವಂತೆ ಒತ್ತಡ ಹೇರಿದ್ದರಿಂದ ಒಪ್ಪಿಗೆ ಕೊಡಿಸಲಾಯಿತು ಎಂದರು.
ಕಬಿನಿ ನದಿಯಿಂದ ಮೈಸೂರು ನಗರಕ್ಕೆ ನೀರು ತರುವ ಯೋಜನೆ ಯಾವ ಹಂತದಲ್ಲಿ ಇದೆ ಎನ್ನುವ ವಿಚಾರ ಗೊತ್ತಿಲ್ಲ. ಆಯುಕ್ತರು ವಾರ್ಡ್‍ಗೆ ಹೋಗುತ್ತಾರೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಗೆ ಬರುವ ಮುನ್ನ ಬೆಳಗ್ಗೆ ವಾರ್ಡ್ ವಾರು ಭೇಟಿ ನೀಡಬೇಕು. ಪೌರ ಕಾರ್ಮಿಕರು ಬೆಳಗ್ಗೆ ಶಿಸ್ತಿನಿಂದ ಆಗಮಿಸಿ ಕೆಲಸ ಮಾಡುವಾಗ ಸಿಬ್ಬಂದಿ ಯಾಕೆ ಮಾಡಲ್ಲ. ಬೆಳಗ್ಗೆ ವಾಕಿಂಗ್ ಮಾಡುವ ಬದಲು ಆಯಾ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿದರೆ ತಕ್ಷಣ ಪರಿಹರಿಸಬಹುದು ಎಂದು ಹೇಳಿದರು.
ಅಧೀಕ್ಷಕ ಅಭಿಯಂತರ ಕೆ.ಜೆ.ಸಿಂಧು, ವಲಯ ಸಹಾಯಕ ಆಯುಕ್ತ ಸತ್ಯಮೂರ್ತಿ, ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಕಾರ್ಯಪಾಲಕ ಅಭಿಯಂತರ ಆಸಿಫ್, ನಗರಸಭೆ ಆಯುಕ್ತ ಚಂದ್ರಶೇಖರ್, ಮುಖ್ಯಾಧಿಕಾರಿಗಳಾದ ದೀಪಾ, ಸುರೇಶ್, ರವಿಕೀರ್ತಿ, ಬಸವರಾಜು ಹಾಜರಿದ್ದರು.