ಬಹುಸಂಖ್ಯಾತ ಒಕ್ಕಲಿಗರಿಗೆ ಭವನ ಇಲ್ಲದಿರುವುದು ನಾಚಿಕೆಗೇಡು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.28: ತಾಲ್ಲೂಕುಗಳಲ್ಲಿ ಮತ್ತು ಜಿಲ್ಲೆಯಲ್ಲಿ ಬಹುಸಂಖ್ಯಾತರಾಗಿರುವ ಒಕ್ಕಲಿಗರಿಗೆ ಸಮುದಾಯದ ಜನರು ತಮ್ಮ ಕುಂದುಕೊರತೆಗಳನ್ನು ಚರ್ಚಿಸಲು ಒಂದು ಭವನ ಇಲ್ಲದಿರುವುದು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಭವನ ಇಲ್ಲದಿರುವುದು ನಾಚಿಕೆಗೇಡಿನ ವಿಷಯ ಎಂದು ಕರ್ನಾಟಕ ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಸಾಹಿತಿ ಪೆÇ್ರ.ಜಯಪ್ರಕಾಶ್‍ಗೌಡ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತೋತ್ಸವವದಲ್ಲಿ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ತಾನು ಆಡಳಿತ ನಡೆಸುವ ಸಂದರ್ಭದಲ್ಲಿ ಜನಸಾಮಾನ್ಯರ ಬಗ್ಗೆ ಯೋಚಿಸಿದ ರಾಜ, ಪ್ರಜೆಗಳ ಸಂಕಷ್ಟದಲ್ಲಿ ಭಾಗಿಯಾಗುವ ಮಹರಾಜ ಇವರುಗಳನ್ನು ನಾಡಿನ ಜನತೆ ಎಂದಿಗೂ ಮರೆಯುವುದಿಲ್ಲ. ಹಾಗೆಯೇ ಆಡಳಿತದಲ್ಲಿ ಪಾರದರ್ಶಕತೆ, ದೂರದೃಷ್ಟಿಯನ್ನು ಹೊಂದಿದ್ದ ಕೆಂಪೇಗೌಡರ ಚಿಂತನೆಗಳು ಎಲ್ಲಾ ಕಾಲಕ್ಕೂ ಸರ್ವಸಮ್ಮತವಾಗಿವೆ. ಯಲಹಂಕದಿಂದ ಪ್ರಾರಂಭಿಸಿ ಸರ್ವಧರ್ಮಗಳ, ವೃತ್ತಿಗಳನ್ನು ಮಾಡುವವರಿಗೆ ಪ್ರತ್ಯೇಕ ಸ್ಥಳಗಳನ್ನು ನೀಡಿ ಎಲ್ಲರೂ ಸಹಬಾಳ್ವೆಯಿಂದ ಸಾಮರಸ್ಯದ ಜೀವನ ನಡೆಸಲು ಪರಿಶ್ರಮ ಹಾಕಿದ ಕೆಂಪೇಗೌಡರನ್ನು ಹೋಲುವ ಮತ್ತೊಬ್ಬ ವ್ಯಕ್ತಿ ಈ ವಿಶ್ವದಲ್ಲಿ ಇಲ್ಲ. ಜನಸಾಮಾನ್ಯರ ಮನಸ್ಸಿನಲ್ಲಿ ನೆಲೆಯೂರುವಂಥಹ ನಾಯಕರುಗಳು ಮಾತ್ರ ಭೂಮಿಯ ಮೇಲೆ ಶಾಶ್ವತ ಸ್ಥಾನವನ್ನು ಗಳಿಸುತ್ತಾರೆ. ಅವರಲ್ಲಿ ನಾಡಪ್ರಭು ಕೆಂಪೇಗೌಡರು ಕೂಡ ಒಬ್ಬರು. ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ಕಸಾಪ ಭವನ ಮತ್ತು ಒಕ್ಕಲಿಗರ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಾನೂ ಸಹ ಕಳೆದ 30 ವರ್ಷಗಳಿಂದಲೂ ಈ ಬಗ್ಗೆ ಚುನಾಯಿತ ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿಗೆ ಹಾಗೂ ಒಕ್ಕಲಿಗ ಭವನಕ್ಕೆ ಕೂಡಲೇ ನಿವೇಶನ ನೀಡಿ ಭವನ ನಿರ್ಮಾಣ ಮಾಡಲು ರಾಜಕಾರಣಿಗಳು ಇಚ್ಚಾಶಕ್ತಿ ಪ್ರದರ್ಶಿಸಬೇಕು ಎಂದರು.
ಶಾಸಕ ಹೆಚ್.ಟಿ.ಮಂಜು ಮಾತನಾಡಿ ಕರ್ನಾಟಕದ ಇತಿಹಾಸದಲ್ಲಿ ಸುವರ್ಣಯುಗವಾಗಿದ್ದ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದ ಕೆಂಪೇಗೌಡರು ಅಂಥದ್ದೇ ನಗರವನ್ನು ನಿರ್ಮಾಣ ಮಾಡಬೇಕೆಂಬ ಸಂಕಲ್ಪಮಾಡಿ ನಗರ ನಿರ್ಮಾಣ ಮಾಡಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಬೆಂಗಳೂರು ಇಂದು ವಿಶ್ವದರ್ಜೆ ನಗರವಾಗಿ, ವಾಣಿಜ್ಯ ನಗರವಾಗಿ ಹೊರಹೊಮ್ಮಿದೆ ಎಂದರೆ ಅದಕ್ಕೆ ಕಾರಣ ಕೆಂಪೇಗೌಡರ ಪರಿಶ್ರಮ. ಇಂಥಹ ಆದರ್ಶಪುರುಷರು ನಮ್ಮ ನಾಡಿನಲ್ಲಿ ಮತ್ತೆ ಹುಟ್ಟಿಬರಲಿ ಎಂದರು.
ನಿವೇಶನ ಮತ್ತು ಭವನಗಳ ನಿರ್ಮಾಣಕ್ಕೆ ಕ್ರಮ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಟೌನ್ ಕ್ಲಬ್ ಹಿಂಭಾಗ ಎರಡು ಗುಂಟೆ ನಿವೇಶನ ನೀಡಲಾಗಿದ್ದು ಹಾಗೂ ಒಕ್ಕಲಿಗರ ಭವನ ಮತ್ತು ವೀರಶೈವ ಭವನಕ್ಕೆ ಪುರಸಭೆಯ ಪಕ್ಕದಲ್ಲಿ ತಲಾ ನೂರು ನೂರು ಅಡಿಗಳ ನಿವೇಶನವನ್ನು ನೀಡಲು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಒಕ್ಕಲಿಗರ ಭವನ ಮತ್ತು ವೀರಶೈವ ಭವನದ ನಿರ್ಮಾಣಕ್ಕೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ತಮಟೆಯ ಸದ್ದಿಗೆ ಕುಣಿದು ಕುಪ್ಪಳಿಸಿದ ಶಾಸಕ. ಪಟ್ಟಣದ ಪ್ರವಾಸಿಮಂದಿರದಿಂದ ಮೆರವಣಿಗೆಯಲ್ಲಿ ಸಾಗಿದ ಶಾಸಕ ಹೆಚ್.ಟಿ.ಮಂಜು ಪಟ್ಟಣದ ಮುಖ್ಯರಸ್ತೆಯಲ್ಲಿ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ನಗಾರಿ ತಮಟೆ ಸದ್ದಿಗೆ ಕುಣಿದು ಮೆರವಣಿಗೆಯಲ್ಲಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ತಹಶೀಲ್ದಾರ್ ನಿಸರ್ಗಪ್ರಿಯ, ತಾಪಂ ಇಓ ಸತೀಶ್, ರಾಜ್ಯ ಮಾರಾಟ ಮಹಾಮಂಡಳಿಯ ನಿರ್ದೇಶಕ ಎಸ್.ಎಲ್.ಮೋಹನ್, ಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಹೆಚ್.ಕೆ.ಅಶೋಕ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವರಾಮೇಗೌಡ, ಡಾ.ಇರ್ಷಾದ್, ಕಸಾಪ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ, ಪ್ರಥಮದರ್ಜೆ ಗುತ್ತಿಗೆದಾರ ಎ.ಆರ್.ರಘು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು ಸೇರಿದಂತೆ ಹಲವರಿದ್ದರು.