ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ : ಡಾ.ಗಿರೀಶ ದಿಲೀಪ್ ಬದೋಲೆ
ಹುಮನಾಬಾದ : ಸೆ.26:ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಸ್ವಚ್ಛತೆ ಮತ್ತು ನೈರ್ಮಲ್ಯ ಕುರಿತು ಜಿಲ್ಲೆಯಾದ್ಯಂತ ಸ್ವಭಾವ ಸ್ವಚ್ಛತಾ ಸಂಸ್ಕಾರ ಸ್ವಚ್ಛತಾ ಧ್ಯೇಯದೊಂದಿಗೆ ಸೆಪ್ಟೆಂಬರ್ 14 ರಿಂದ 2ನೇ ಅಕ್ಟೋಬರ್ ವರೆಗೆ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ಪ್ರತಿಯೊಂದು ಗ್ರಾಮದಲ್ಲಿ ಹಮ್ಮಿಕೊಂಡು ಜನರಿಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ದಿಲೀಪ್ ಬದೋಲೆ ತಿಳಿಸಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಮಂಗಳವಾರ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮವನ್ನು ಪಾರಿವಾಳ ಹಾರಿಸುವ ಮುಖಾಂತರ ಉದ್ಘಾಟನೆ ಮಾಡಿ ಮಾತನಾಡಿ,
ಸ್ವಚ್ಛತಾ ಕೀ ಭಾಗಿದಾರಿ, ಶ್ರಮದಾನದಿಂದ ಸಂಪೂರ್ಣ ಸ್ವಚ್ಛತಾ ಸಫಾಯಿ ಮಿತ್ರ ಸುರಕ್ಷಾ ಶಿಬಿರ, ಕಾರ್ಯಕ್ರಮದ ಪ್ರಯುಕ್ತ ಜಿಲ್ಲೆಯಲ್ಲಿರುವ ಪ್ರಮುಖ ಬೀದಿಗಳು, ಶಾಲೆ, ಕಾಲೇಜು, ಅಂಗನವಾಡಿ, ಕಲ್ಯಾಣಿ, ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಸರಕಾರಿ ಕಚೇರಿಯಲ್ಲಿ, ವಸತಿ ನಿಲಯಗಳಲ್ಲಿ, ಮುಂತಾದ ಸ್ಥಳಗಳಲ್ಲಿ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಅಭಿಯಾನ ಕಾರ್ಯಕ್ರಮಗಳನ್ನು ಹಾಗೂ ಅಕ್ಟೋಬರ್ 2 ಗಾಂಧೀ ಜಯಂತಿ ದಿನದಂದು ಸ್ವಚ್ಛ ಭಾರತ ದಿವಸ್ ಎಂಬ ಬೃಹತ ಕಾರ್ಯಕ್ರಮವನ್ನು ಆಯೋಜಿಸಬೇಕೆಂದು ನಿರ್ದೇಶನ ನೀಡಿದರು.
ಶೌಚಾಲಯ ಬಳಕೆ ಕುರಿತು ಶಾಲಾ ಮಕ್ಕಳ ಜಾಥಾ, ಸಫಾಯಿ ಮಿತ್ರ ಸುರಕ್ಷಾ ಶಿಬಿರಗಳ ಆಯೋಜನೆ, ಶಾಲಾ ಮಕ್ಕಳಲ್ಲಿ ಸ್ಲೋಗನ್ ಬರೆಯುವ ಸ್ಪರ್ಧೇ, ಸ್ವಚ್ಛತಾ ಕಾರ್ಮಿಕರಿಗೆ ಸನ್ಮಾನ, ಸುಸ್ಥಿರತೆ ಕುರಿತು ಗ್ರಾಮ ಪಂಚಾಯತ ಅಧ್ಯಕ್ಷ,ಸದಸ್ಯರ ಜೊತೆ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಿ ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಬೇಕು. ಪ್ರವಾಸಿ ತಾಣಗಳು ಮತ್ತು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳನ್ನು ಗುರುತಿಸಿ ಸುತ್ತಮುತ್ತ ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಸೂಚಿಸಿದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ಬಿ ನಾಯ್ಕರ ಮಾತನಾಡಿ, ಸ್ವಚ್ಛತೆ ಪ್ರಜ್ಞೆ ಪ್ರತಿಯೊಬ್ಬರಿಂದ ಹೊರಹೊಮ್ಮಬೇಕು. ಇದರಿಂದ ಕುಟುಂಬ, ಸಮಾಜ, ಗ್ರಾಮ ಸ್ವಚ್ಛವಾಗಿರುತ್ತವೆ. ಗ್ರಾ.ಪಂ ದಿಂದ ಈಗಾಗಲೇ ಸ್ವಚ್ಛ ವಾಹಿನಿಗಳನ್ನು ನೀಡಲಾಗಿದ್ದು. ಕಸ ಎಲ್ಲೆಂದರಲ್ಲಿ ಬಿಸಾಡದೆ ಹಸಿ, ಒಣ ಕಸ ಪ್ರತ್ಯೇಕವಾಗಿ ನೀಡಬೇಕು ಮತ್ತು ಗ್ರಾಮೀಣ ಪ್ರದೇಶದಲ್ಲಿ ಉತ್ಪತಿಯಾಗುವ ಕಸವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸುವ ಕುರಿತಂತೆ ಸ್ವಸಹಾಯ ಸಂಘ ಸದಸ್ಯರಿಗೆ ಅರಿವು ಮೂಡಿಸುವ ಚಟುವಟಿಕೆ ಕೈಗೊಳ್ಳಬೇಕು ಎಂದರು.
ಯೋಜನಾ ನಿರ್ದೇಶಕರು ಜಿ.ಪಂ ಜಗನಾಥ ಮೂರ್ತಿ, ಸ್ವಚ್ಛ ಭಾರತ್ ಮಿಷನ್ ವಿಶೇಷ ನಿರ್ದೇಶಕರು ಡಾ. ಗೌತಮ್ ಅರಳಿ,ತಾ.ಪಂ ಸಹಾಯಕ ನಿರ್ದೇಶಕರು ಜಗನ್ನಾಥ್ ಹಾಗೂ ಶಿವಲೀಲಾ, ತಾಲೂಕಿನ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳ ಗ್ರಾ.ಪಂ ಪಿಡಿಒ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.