ಹದಗೆಟ್ಟ ರಸ್ತೆಗಳ ಅಭಿವೃದ್ದಿ ಯಾವಾಗ..? :ಶಿವಾನಂದ ಪಾಟೀಲ್
ಚಿಂಚೋಳಿ:ಸೆ.26: ತಾಲ್ಲೂಕಿನ ಬಹುತೇಕ ರಸ್ತೆಗಳು ಹದಗೆಟ್ಟಿದ್ದು ಇದರಿಂದ ನಿತ್ಯ ಸವಾರರಿಗೆ ಭೀತಿ ಉಂಟಾಗುತ್ತಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕೆಂದು ಹೋರಾಟಗಾರ ಶಿವಾನಂದ ಮಾಲಿ ಪಾಟೀಲ್ ಆಗ್ರಹಿಸಿದ್ದಾರೆ.
ಸದ್ಯ ತಾಲ್ಲೂಕಿನಲ್ಲಿ ಮಳೆಯಾಗುತ್ತಿದ್ದು ಮೊದಲೇ ಹದಗೆಟ್ಟು ಹೋಗಿರುವ ರಸ್ತೆಗಳ ತೆಗ್ಗು ಗುಂಡಿಗಳಲ್ಲಿ ನೀರು ತುಂಬಿಕೊಂಡು ಅದರ ಆಳ ಅಂತ್ಯ ಗೊತ್ತಾಗದಂತಾಗಿವೆ. ಇನ್ನು ಬೈಕ್ ಸವಾರರು ದಿನನಿತ್ಯ ಬಿದ್ದು ಕೈ ಕಾಲು ಮುರಿದುಕೊಳ್ಳುವಂತ ಪರಿಸ್ಥಿತಿ ಎದುರಾಗಿದೆ. ತಾಲ್ಲೂಕಿನ ಐನಾಪುರ,ಚಿಮ್ಮನಚೋಡ,
ಗಂಗನಪಳ್ಳಿ,ಕುಂಚಾವರಂ ಸೇರಿದಂತೆ ಬಹುತೇಕ ಗ್ರಾಮಗಳ ಮುಖ್ಯರಸ್ತೆಗಳು ಹಾಳಾಗಿದ್ದು ಅವುಗಳ ಅಭಿವೃದ್ಧಿ ಮಾಡದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ಹೆಸರಿಗೆ ಮಾತ್ರ ಅಧಿಕಾರ ಮಾಡುತ್ತಿದ್ದು ಸಾರ್ವಜನಿಕರ ಹಿತವನ್ನು ಮರೆತಂತೆ ಕಾಣುತ್ತಿದೆ.
ಜನರನ್ನು ಇನ್ನು ಹೆಚ್ಚಿನ ಪ್ರಾಣಾಪಾಯದಂತಹ ಅನಾಹುತಗಳಿಂದ ತಪ್ಪಿಸಲು ಈಗಲಾದರೂ ಎಚ್ಚೆತ್ತುಕೊಂಡು ಹದಗೆಟ್ಟ ರಸ್ತೆಗಳ ಅಭಿವೃದ್ದಿಗಾಗಿ ಕಾರ್ಯನಿರ್ವಹಿಸುವ ಕೆಲಸ ಮಾಡಲಿ ಅಂದಾಗ ಮಾತ್ರ ಸಾರ್ವಜನಿಕರಿಗೆ ಅಧಿಕಾರಿಗಳ ಮೇಲೆ ಹಾಗೂ ಜನಪ್ರತಿನಿಧಿಗಳ ಮೇಲೆ ಸ್ವಲ್ಪ ವಿಶ್ವಾಸವಾದರೂ ಮೂಡುತ್ತದೆ ಎಂದು ಪತ್ರಿಕೆ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.