ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
ಕೋಲಾರ, ಜೂ. ೨೮- ವಿದ್ಯಾರ್ಥಿಗಳು ಮಾಡುವ ಸಾಧನೆಗೆ ಮೌಲ್ಯ ಬರುವುದು ನಿಮ್ಮ ವ್ಯಕ್ತಿತ್ವದಿಂದ. ಸೋಲಿಗೆ ನೆಪಗಳನ್ನು ಹುಡಕಬಾರದು, ಕಾರಣಗಳನ್ನು ಹುಡುಕುವುದರಿಂದ ಯಶಸ್ಸು ಸಿಗುತ್ತದೆ. ಸೌಲಭ್ಯಗಳ ಕೊರತೆ ಯಾವಾಗ ಇರುತ್ತದೋ ಆಗ ಕೊರತೆ ನಿವಾರಣೆ ಮಾಡಲು ಛಲ ಬರುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಕೆ.ಎ.ದಯಾನಂದ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಯ ಅಡಿಟೋರಿಯಂನಲ್ಲಿಂದು ಹಮ್ಮಿಕೊಂಡಿದ್ದ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿಶೇಷ ಪೂರ್ವ ಸಿದ್ದತಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿಮ್ಮ ವ್ಯಕ್ತಿತ್ವ ,ಶ್ರಮ ಧನಾತ್ಮಕ ಕಡೆ ಹೋದರೆ ನೀವು ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ. ಮನಸ್ಸು ಮಾಡಿ ಛಲದಿಂದ ಓದಿದರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಪ್ರತಿ ಕ್ಷಣವು ಅವಕಾಶಗಳನ್ನು ಹುಡುಕುತ್ತಿರಬೇಕು ಅದು ಸಿಗುವವರೆಗೂ ನಮ್ಮ ಪ್ರಯತ್ನ ಬಿಡಬಾರದು ಎಂದರು. ದೇವರಾಜ ಅರಸು ಅವರು ಕಂಡ ಕನಸು ಹಾಸ್ಟೆಲ್‌ಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಓದಲು ಕಾರಣವಾಯಿತು ಎಂದರು
ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಮಾತನಾಡಿ, ವಿದ್ಯಾಭ್ಯಾಸ ಮಾಡುವಾಗ ನಿಮ್ಮಲ್ಲಿರುವ ಕೀಳರಿಮೆಯನ್ನು ಮೊದಲು ತೆಗೆದು ಹಾಕಬೇಕು. ಉತ್ತಮ ಶಿಕ್ಷಣ ಪಡೆಯುವುದರಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಾಹಿತಿಯನ್ನು ಪಡೆಯಲು ತುಂಬಾ ಸುಲಭವಾಗಿದೆ. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಕೋಚಿಂಗ್ ಸೆಂಟರ್ ಮೊಬೈಲ್ ಮೂಲಕ ಯಾವ ಪಠ್ಯಪುಸ್ತಕಗಳನ್ನಾದರೂ ಓದಬಹುದು. ಯಾವ ಸಮಯದಲ್ಲಿ ಎಷ್ಟು ಬರೆಯಬೇಕು ಎಂಬ ಮಾಹಿತಿಯನ್ನು ಪಡೆಯಬಹುದು. ಹಿಂದಿನ ದಿನಗಳಲ್ಲಿ ಇದು ಸುಲಭ ಮಾರ್ಗವಾಗಿರಲಿಲ್ಲ ಎಂದರು.
ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು ರವರು ಮಾತನಾಡಿ ತಂಬಾಕು, ಗುಟಕ ಮತ್ತು ಗಾಂಜ ಮುಂತಾದ ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು. ಅವುಗಳ ವ್ಯಸನಕ್ಕೆ ಒಳಗಾಗದೇ ಉತ್ತಮ ಶಿಕ್ಷಣವನ್ನು ಪಡೆದು ಜೀವನವನ್ನು ರೂಪಿಸಿಕೊಳ್ಳಬೇಕು ಹಾಗೂ ಶಾಲಾ-ಕಾಲೇಜು ಆವರಣದಲ್ಲಿ ಮಾರಾಟ ಮಾಡಿದರೆ ಅಂತಹವರ ವಿರುದ್ಧ ೧೯೩೦ ಸಂಖ್ಯೆ ಕರೆ ಮಾಡಿ ದೂರು ನೀಡಬಹುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷಧಿಕಾರಿ ಎಂ.ನಾರಾಯಣ, ಹೆಚ್ಚುವರಿ ಪೊಲೀಸ್ ಅಧಿಕಾರಿ ನಾಗ್ತೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೋಮಶೇಖರ.ವೈ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಮುರಳಿ, ಇಂಡಿಯಾ ಫಾರ್ ಐ.ಎ.ಎಸ್ ಸಂಸ್ಥಾಪಕ ಶ್ರೀನಿವಾಸ್, ಸಂಪನ್ಮೂಲ ವ್ಯಕ್ತಿಗಳಾದ ಅಭಿಷಕ್ ಹಾಗೂ ಚೇತನ್.ಎನ್.ಜಿ, ಹಾಸ್ಟಲ್ ವಾರ್ಡ್ನ್‌ಗಳು ಹಾಗೂ ೭೦೦ ರಿಂದ ೮೦೦ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.