ಮಾದಕ ವಸ್ತುಗಳ ಸೇವನೆ, ಸಾವಿಗೆ ಆಹ್ವಾನ
ಕೋಲಾರ, ಜೂ,೨೮-ಇತ್ತೀಚಿನ ದಿನಗಳಲ್ಲಿ ಯುವಕರು ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಡ್ರಗ್ಸ್??ನಿಂದ ಅನೇಕ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಯುವ ಪೀಳಿಗೆಯನ್ನು ಆವರಿಸಿರುವ ಮಾದಕ ವಸ್ತುಗಳು ಅವರನ್ನು ದೈಹಿಕವಾಗಿ ಮಾತ್ರವಲ್ಲ, ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತಿದೆ. ಇದರಿಂದ ನಾನಾ ಮಂದಿ ಅಪಾಯಕ್ಕೆ ಸಿಲುಕುತ್ತಿದ್ದಾರೆಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಅಭಿಪ್ರಾಯ ಪಟ್ಟರು.
ಇಂದು ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಅಂಗವಾಗಿ ಜಿಲ್ಲಾಡಳಿತ ಜಿಲ್ಲಾ ಪೊಲೀಸ್ ಹಾಗೂ ದೇವರಾಜ ಅರಸು ವೈದ್ಯಕೀಯ ಮಹಾ ವಿದ್ಯಾಲಯ ಸಹಯೋಗದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಇದನ್ನು ಪ್ರತಿ ವರ್ಷ ಜೂನ್ ೨೬ ರಂದು ಮಾದಕ ವ್ಯಸನ ಮುಕ್ತ ಜಗತ್ತನ್ನು ನಿರ್ಮಿಸಲು ಕ್ರಮ ಮತ್ತು ಸಹಕಾರವನ್ನು ಬಲಪಡಿಸಲು ಆಚರಿಲಾಗುತ್ತದೆ ಪ್ರತಿ ವರ್ಷ ಪ್ರಪಂಚದಾದ್ಯಂತದ ವಿವಿಧ ಸಂಸ್ಥೆಗಳು ವಿಶ್ವ ಮಾದಕವಸ್ತು ವಿರೋಧಿ ದಿನವನ್ನು ಆಚರಿಸುತ್ತವೆ ಜೊತೆಗೆ ಸಮಾಜಕ್ಕೆ ನಿಷೇಧಿತ ಮಾದಕವಸ್ತುಗಳು ಉಂಟುಮಾಡುವ ಪ್ರಮುಖ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುತ್ತವೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಎಂ. ನಾರಾಯಣ ಅವರು ಮಾತನಾಡಿ ಇಂದಿನ ಯುವಜನತೆಯು ಮೋಜು, ಮಸ್ತಿ, ತಡ ರಾತ್ರಿಯ ಪಾರ್ಟಿ ಎಂದು ಜೀವನ ಶೈಲಿಯನ್ನೇ ಬದಲಾಯಿಸಿಕೊಂಡಿದ್ದಾರೆ. ಇದರಿಂದ ಹದಿಹರೆಯದ ವಯಸ್ಸಿನಲ್ಲಿ ಹಾದಿ ತಪ್ಪುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಹೀಗಾಗಿ ಯುವಕರಂತೂ ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದು, ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣೆ ಕಾನೂನ ಬಾಹಿರ ಚಟುವಟಿಕೆಯೆಂದು ತಿಳಿದಿದ್ದರೂ ಇದರಲ್ಲಿ ತೊಡಗಿಸಿಕೊಂಡಿರುವ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ. ಹೀಗಾಗಿ ಮಾದಕ ವ್ಯಸನ ಮತ್ತು ಇದರ ಕಳ್ಳ ಸಾಗಾಣಿಕೆಯಂತಹ ಚಟುವಟಿಕೆಗಳಿಂದ ಜನರನ್ನು ರಕ್ಷಿಸಲು ಹಾಗೂ ಈ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಪ್ರತಿ ವರ್ಷ ಜೂನ್? ೨೬ರಂದು ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.
ವಿಶ್ವದಾದ್ಯಂತ ಈ ದುಶ್ಚಟಗಳಿಗೆ ಮಕ್ಕಳು ಮತ್ತು ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣೆ ಕಾನೂನ ಬಾಹಿರ ಎಂದು ಗೊತ್ತಿದ್ದರೂ ಇದರ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಡ್ರಗ್ ಮಾಫಿಯಾ ಹತೋಟಿಗೆ ತರಲು ವಿಶ್ವದೆಲ್ಲೆಡೆ ಕಾನೂನು ಪ್ರಯತ್ನಗಳು ನಡೆಯುತ್ತಿವೆ. ಆದರೆ ಇದನ್ನು ಬುಡ ಸಮೇತ ಕಿತ್ತು ಹಾಕಲು ಸಾಧ್ಯವಾಗಿಲ್ಲ. ಪ್ರತಿಯೊಬ್ಬ ನಾಗರಿಕನೂ ಈ ಬಗ್ಗೆ ಜಾಗೃತಿ ಹೊಂದಿ ವಿಶ್ವವನ್ನು ಮಾದಕವಸ್ತುಗಳಿಂದ ಮುಕ್ತವಾಗಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ.
ವ್ಯಸನ ಎನ್ನುವುದು ಒಂದು ಸಂಕೀರ್ಣವಾದ ಸಮಸ್ಯೆಯಾಗಿದೆ. ತಾತ್ಕಾಲಿಕವಾಗಿ ಆನಂದ ನೀಡುವ ಮಾದಕ ದ್ರವ್ಯ ವಸ್ತುಗಳ ಅವಲಂಬನೆಗೆ ಒಳಗಾಗುವುದನ್ನು ಹೆಚ್ಚಾಗಿ ಸಮಾಜದಲ್ಲಿ ಕಾಣುತ್ತಿದ್ದೇವೆ. ಸ್ನೇಹಿತರ ಒತ್ತಾಯ, ದೈಹಿಕ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಹೀಗೆ ಅನೇಕ ಕಾರಣಗಳಿಗಾಗಿ ಜನರು ಮಾದಕ ವ್ಯಸನಿಗಳಿಗೆ ದಾಸರಾಗಿದ್ದಾರೆ. ಇಂತಹ ಹವ್ಯಾಸ ಬಿಟ್ಟು ಹೊರಬರಲಾರದ ಸ್ಥಿತಿಯಲ್ಲಿ ಬಳಲುತ್ತಿದ್ದಾರೆ ಎಂದರು. ಇದಕ್ಕೂ ಮುನ್ನ ಮಾನ್ಯ ಜಿಲ್ಲಾಧಿಕಾರಿಗಳು ವಿಶ್ವ ಮಾದಕ ವಸ್ತು ವಿರೋದಿ ದಿನದ ಪ್ರತಿಜ್ಞಾವಿಧಿ ಬೋದಿಸಿದರು.
ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ ನಾಗ್ತೆ, ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರು ಮತ್ತು ಡೀನ್‌ಆದ ಡಾ. ಪ್ರಭಾಕರ್, ಮನೋಶಾಸ್ತ್ರ ವಿಭಾಗದ ಮುಖ್ಯಸ್ಥ ಮೋಹನ್ ರೆಡ್ಡಿ, ರಿಜಿಸ್ಟ್ರಾರ್ ಪ್ರಸಾದ್, ಆರೋಗ್ಯ ಅಧೀಕ್ಷಕರು ಜೆ.ಕೃಷ್ಣಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.