ವಾರ್ತಾಭವನದಲ್ಲಿ ಗಿಡ ನೆಟ್ಟು ೧೭ನೇ ದಿನದ ಸಂಭ್ರಮ
ಕೋಲಾರ, ಜೂ,೨೮-ಕದಂಬ ಸೇವಾ ಸಂಸ್ಥೆ ಜೂನ್ ೫ ರ ಪರಿಸರ ದಿನಾಚರಣೆ ಅಂಗವಾಗಿ ಪ್ರತಿದಿನ ವಿವಿಧ ಇಲಾಖೆ ಆವರಣಗಳಲ್ಲಿ ವಿವಿಧ ಜಾತಿಯ ಅಪರೂಪದ ಸಸಿಗಳನ್ನು ನೆಡುವ ಮೂಲಕ ವಿಶಿಷ್ಟವಾಗಿ ಪರಿಸರ ದಿನದ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಅಭಿಯಾನದ ೧೭ನೇ ದಿನ ನಗರದ ವಾರ್ತಾ ಭವನದಲ್ಲಿ ಸಂಪಿಗೆ ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಿದ್ದಾರೆ.
ಅಭಿಯಾನದ ಭಾಗವಾಗಿ ಈ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ವರೆಗೆ ಜಿಲ್ಲಾಡಳಿತ ಭವನ, ಜಿಲ್ಲಾಪಂಚಾಯತ್ ಕಚೇರಿ, ಉಪ ವಿಭಾಗಾಧಿಕಾರಿಗಳ ಕಚೇರಿ, ನ್ಯಾಯಾಲಯ ಆವರಣ ಸೇರಿದಂತೆ ನಗರದ ವಿವಿಧ ಕಚೇರಿಗಳ ಆವರಣದಲ್ಲಿ ಅಪರೂಪದ ಸಸಿಗಳನ್ನು ನೆಡಲಾಗುತ್ತಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ವಿ.ಚೇತನ್‌ಕುಮಾರ್ ಅವರು ಅಭಿಯಾನದ ಬಗ್ಗೆ ಮಾತನಾಡುತ್ತ ಮರಳು ಮಾಡುವ ಜನರಿಗಿಂತ ನೆರಳು ನೀಡುವ ಮರಗಳನ್ನು ನಂಬುವುದೇ ಶ್ರೇಷ್ಟ ಎಂಬ ಸಿದ್ದಾಂತವನ್ನಿಟ್ಟುಕೊಂಡು ಜೂನ್ ೫ ರಿಂದ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕೋಲಾರ ಜಾಗತಿಕ ತಾಪಮಾನದ ಬಗ್ಗೆ ಎಚ್ಚೆತ್ತುಕೊಂಡು ಜಿಲ್ಲೆಯನ್ನು ಹಸಿರು ಹೊದಿಕೆಯನ್ನಾಗಿ ಮಾಡಲು ಸಾರ್ವಜನಿಕರು ಸಹಕರಿಸಬೇಕಾಗಿದೆ.
ಸಂಸ್ಥೆಯೂ ಪ್ರತಿನಿತ್ಯ ಒಂದು ಗಿಡ ನೆಡುವ ಸಂಕಲ್ಪದೊಂದಿಗೆ ದಿನಕ್ಕೊಂದು ಸಸಿ ನೆಡುವ ಅಭಿಯಾನ ಆರಂಭಿಸಿದೆ. ಪ್ರಮುಖವಾಗಿ ಸರ್ಕಾರಿ ಕಛೇರಿಗಳು, ವಸತಿ ಶಾಲೆಗಳು ಮತ್ತು ಶಾಲೆಗಳ ಬಳಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪರಿಸರ ಉಳಿಸುವ ನಿಟ್ಟಿನಲ್ಲಿ ಇದೊಂದು ದಿಟ್ಟ ಹೆಜ್ಜೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕದಂಬ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷರಾದ ಆರ್. ನಂದಿನಿ, ಇಲಾಖೆಯ ಸಿಬ್ಬಂದಿ ಸೇರಿದಂತೆ ಪರಿಸರ ಕಾಳಜಿಯುಳ್ಳ ಮತ್ತಿತರರು ಉಪಸ್ಥಿತರಿದ್ದರು.