14 ಕೇಂದ್ರಗಳಲ್ಲಿ ಜೂ. 30ರ ಶಿಕ್ಷಕರ ಅರ್ಹತಾ ಪರೀಕ್ಷೆ
ಕೋಲಾರ,ಜೂ,೨೮- ನಗರದ ೧೪ ಕೇಂದ್ರಗಳಲ್ಲಿ ಜೂ.೩೦ ರಂದು ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಲಿದ್ದು, ಯಾವುದೇ ಅವ್ಯವಹಾರ,ಗೊಂದಲಗಳಿಗೆ ಅವಕಾಶವಿಲ್ಲದಂತೆ ಎಲ್ಲಾ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಟಿಇಟಿ ಪರೀಕ್ಷಾ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕೋಲಾರ ನಗರದ ಒಟ್ಟು ೧೪ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಬೆಳಗಿನ ಅಧಿವೇಶನ ೯-೩೦ರಿಂದ ೧೨ರವರೆಗೂ ಪತ್ರಿಕೆ-೧ರ ಪರೀಕ್ಷೆ ೯ ಕೇಂದ್ರಗಳಲ್ಲಿ ಹಾಗೂ ಮಧ್ಯಾಹ್ನ ೨ ರಿಂದ ೪-೩೦ ರವರೆಗೂ ಪತ್ರಿಕೆ-೨ರ ಪರೀಕ್ಷೆ ೧೪ ಕೇಂದ್ರಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕೆ-೧ ಬೆಳಗ್ಗೆ ೯-೩೦ ರಿಂದ ೧೨ ಗಂಟೆವರೆಗೂ ೯ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ನಡೆಯಲಿದ್ದು, ಒಟ್ಟು ೨೧೪೨ ಅಭ್ಯರ್ಥಿಗಳು ನೋಂದಣಿ ಮಾಡಿಸಿದ್ದಾರೆ. ಪತ್ರಿಕೆ-೨ರ ಪರೀಕ್ಷೆ ಮಧ್ಯಾಹ್ನ ೨ ರಿಂದ ೪-೩೦ರವರೆಗೂ ನಡೆಯಲಿದ್ದು, ೩೩೯೪ ಮಂದಿ ನೋಂದಣಿ ಮಾಡಿಸಿದ್ದಾರೆ ಎಂದು ತಿಳಿಸಿದರು.
ಯಾವುದೇ ಸಮಸ್ಯೆ ಎದುರಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀ.ವ್ಯಾಪ್ತಿಯಲ್ಲಿ ೧೪೪ ನೇ ಸೆಕ್ಷನ್ ಅನ್ವಯ ನಿಷೇದಾಜ್ಞೆ ಜಾರಿ ಮಾಡಿದ್ದು, ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಈ ೨೦೦ ಮೀ ವ್ಯಾಪ್ತಿಯಲ್ಲಿನ ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ಬೆಳಗ್ಗೆ ೮-೩೦ ರಿಂದ ಸಂಜೆ ೪-೩೦ ರವರೆಗೂ ಮುಚ್ಚಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಪದ್ಮಬಸವಂತಪ್ಪ ಅವರು ಮಾತನಾಡಿ,ಪರೀಕ್ಷಾರ್ಥಿಗಳಿಗೆ ಶುದ್ದ ಕುಡಿಯುವ ನೀರು ಒದಗಿಸಿ, ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು. ಡಿಡಿಪಿಐ ಕೃಷ್ಣಮೂರ್ತಿ ಸಭೆಗೆ ಮಾಹಿತಿ ನೀಡಿ, ಪ್ರವೇಶದ್ವಾರ, ಕೇಂದ್ರದ ಕಾರಿಡಾರ್, ಬಂಡಲ್ ಕಟ್ಟುವ ಕಚೇರಿಯಲ್ಲಿ ಸಿಸಿ ಕ್ಯಾಮರಾ ವೀಡಿಯೋ ಕವರೇಜ್‌ಅನ್ನು ಪ್ರತಿ ಕೇಂದ್ರದಲ್ಲೂ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಗರದಲ್ಲೇ ಎಲ್ಲಾ ೧೪ ಕೇಂದ್ರಗಳಿದ್ದು, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ೨ ಕೇಂದ್ರಗಳು, ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ೨ ಕೇಂದ್ರಗಳು, ಚಿನ್ಮಯ ವಿದ್ಯಾಲಯದಲ್ಲಿ ೨ ಕೇಂದ್ರ, ಮಹಿಳಾ ಸಮಾಜದಲ್ಲಿ ೨ ಹಾಗೂ ಸುಭಾಷ್ ಶಾಲೆಯಲ್ಲಿ ೨ ಕೇಂದ್ರಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಉಳಿದಂತೆ ಬೆಂಗಳೂರು ಮಾಂಟೋಸ್ಸರಿ ಶಾಲೆಯಲ್ಲಿ ಒಂದು, ನೂತನ ಸರ್ಕಾರಿ ಪ್ರೌಢಶಾಲೆಯಲ್ಲಿ ಒಂದು ಕೇಂದ್ರ, ಮೆಥೊಡಿಸ್ಟ್ ಶಾಲೆಯಲ್ಲಿ ಒಂದು ಕೇಂದ್ರ, ಎಂಬಿ ರಸ್ತೆಯ ಸೆಂಟ್ಸ್ ಆನ್ಸ್ ಶಾಲೆಯಲ್ಲಿ ಒಂದು ಕೇಂದ್ರ ರಚಿಸಲಾಗಿದೆ ಎಂದು ತಿಳಿಸಿದರು.
ಉಳಿದಂತೆ ಸಭೆಯಲ್ಲಿ ಜಿಪಂ ಸಿಇಒ ಪದ್ಮಬಸವಂತಪ್ಪ, ನಿಕಟಪೂರ್ವ ಅಪರ ಡಿಸಿ ಡಾ.ಶಂಕರ್ ವಾಣಿಕ್ಯಾಳ್, ಜಿಲ್ಲಾಖಜಾನಾಧಿಕಾರಿ ಮಹೇಂದ್ರ, ಡಿಹೆಚ್‌ಒ ಡಾ.ಜಗದೀಶ್, ಬಿಇಒಗಳಾದ ಕನ್ನಯ್ಯ, ಗಂಗರಾಮಯ್ಯ, ಮುನಿವೆಂಕಟರಾಮಾಚಾರಿ, ಮುನಿಲಕ್ಷ್ಮಯ್ಯ, ಶಿಕ್ಷಣಾಧಿಕಾರಿ ಸಗೀರಾ ಅಂಜುಂ, ಡಿವೈಪಿಸಿ ಗುರುಮೂರ್ತಿ, ವಿಷಯ ಪರಿವೀಕ್ಷಕರಾದ ಶಶಿವಧನ, ಎವೈಪಿಸಿ ಮೋಹನ್ ಬಾಬು ಮತ್ತಿತರರಿದ್ದರು.