ಸಾಮಾಜಿಕ ಕಾಳಜಿ ಕೊಡುಗೆ ಸದ್ಬಳಕೆಗೆ ಕರೆ
ಕೋಲಾರ,ಜೂ,೨೮- ಮಣಪ್ಪೂರಂ,ರಿತಿ ಜ್ಯೂವೆಲರ್‍ಸ್ ಸಂಸ್ಥೆ ಕೇವಲ ವ್ಯಾಪಾರ ಮಾತ್ರವಲ್ಲ ಸಾಮಾಜಿಕ ಕಾಳಜಿಯನ್ನೂ ಹೊಂದಿದ್ದು, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ನಿರಂತರವಾಗಿ ನೆರವಾಗುತ್ತಿದೆ ಎಂದು ಸಂಸ್ಥೆಯ ಕರ್ನಾಟಕ ರಾಜ್ಯ ಸೇಲ್ಸ್ ಮಾರ್ಕೆಟಿಂಗ್ ಮುಖ್ಯಸ್ಥ ಪೆರುಮಾಳ್ ತಿಳಿಸಿದರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಿಯು ವಿಭಾಗದ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್, ಪ್ಯಾಡ್ ಬರ್ನಿಂಗ್ ಮೆಷಿನ್, ೧೫೦ ವಿದ್ಯಾರ್ಥಿ,ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಿಸಿ ಅವರು ಮಾತನಾಡುತ್ತಿದ್ದರು.
ಕಲಿಕೆಗೆ ಬಡತನ ಅಡ್ಡಿಯಾಗದು ಎಂದ ಅವರು, ಕಲಿಯುವ ಛಲ, ಶ್ರದ್ಧೆ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಅನೇಕರು ನಿದರ್ಶನರಾಗಿದ್ದಾರೆ, ಸರ್ಕಾರಿ ಶಾಲೆ,ಕಾಲೇಜುಗಳೆಂಬ ಕೀಳಿರಿಮೆ ಅಗತ್ಯವಿಲ್ಲ, ಈ ದೇಶದ ಮಹಾನ್ ಸಾಧಕರೆಲ್ಲರೂ ಈ ಶಾಲೆಗಳಲ್ಲೇ ಓದಿದವರು ಎಂಬ ಹೆಮ್ಮೆ ಇದೆ ಎಂದರು.
ನಮ್ಮ ಸಂಸ್ಥೆಯಿಂದ ಶೈಕ್ಷಣಿಕ ಬಲವರ್ಧನೆಗೆ ನೀಡುವ ನೆರವು ಸದಾ ಮುಂದುವರೆಸುತ್ತೇವೆ ಎಂದ ಅವರು, ವಿದ್ಯಾರ್ಥಿಗಳು
ಪಡೆದ ನೆರವನ್ನು ಸದುಪಯೋಗಪಡಿಸಿಕೊಳ್ಳಿ, ನೀವು ಸಮಾಜ ಹಾಗೂ ದೇಶದ ಆಸ್ತಿಯಾಗಬೇಕು, ಪೋಷಕರಿಗೆ ಹೊರೆಯಾಗದೇ ಶೈಕ್ಷಣಿಕವಾಗಿ ಸಾಧನೆ ಮಾಡಿ ಅವರನ್ನು ಸಂತೋಷಗೊಳಿಸಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲ ಪರುಶುರಾಮ ಉನ್ಕಿ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳಿಗೆ ನೆರವಾಗುವ ಮಣಪ್ಪುರಂ ಜ್ಯುವೆಲರ್‍ಸ್‌ನ ಮುಖ್ಯಸ್ಥರ ಹೃದಯವಂತಿಕೆಗೆ ಧನ್ಯವಾದ ತಿಳಿಸಿ, ಖಾಸಗಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣ ನಾವಿಂದು ನೀಡುತ್ತಿದ್ದೇವೆ ಎಂದರು.
ನಮ್ಮಲ್ಲಿ ನುರಿತ ಉಪನ್ಯಾಸಕರಿದ್ದಾರೆ, ಮಕ್ಕಳ ಸಾಧನೆಗೆ ನೆರವಾಗಿ ನಿಲ್ಲಬಲ್ಲ ಮನಸ್ಸುಳ್ಳವರಾಗಿದ್ದು, ಉತ್ತಮ ಫಲಿತಾಂಶಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ, ವಿದ್ಯಾರ್ಥಿಗಳು ಕಾಲೇಜಿಗೆ ಗೈರಾಗದೇ ನಿರಂತರವಾಗಿ ಬನ್ನಿ, ಉಪನ್ಯಾಸಕರು ಹೇಳಿಕೊಟ್ಟಿದ್ದನ್ನು ಕಲಿಯಿರಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕ ನರಸಾಪುರ ಮಂಜುನಾಥ್, ಮಣಪ್ಪುರಂ,ರಿತಿ ಜ್ಯುವೆಲರ್‍ಸ್‌ನ ಕೋಲಾರ ಮುಖ್ಯಸ್ಥ ಪವನ್, ಸಿಬ್ಬಂದಿ ಕೆ.ಶ್ರೀನಿವಾಸ್, ಮುದಾಸಿರ್, ಕೃಷ್ಣಪ್ಪ, ವೀರಜ್ ಸೇರಿದಂತೆ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.